ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಇಲ್ಲಿಯ ನೂತನ ನಗರ ಬಸ್ ನಿಲ್ದಾಣ (ಸಿಬಿಟಿ) ನಿರ್ಮಾಣ ಕಾಮಗಾರಿಗೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೋಮವಾರ ಸಿಬಿಟಿ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಸಿಬಿಟಿ ಬಸ್ ನಿಲ್ದಾಣಕ್ಕೆ ಅಗತ್ಯವಿರುವ ನೂತನ ಕಟ್ಟಡವನ್ನು ₹13.11 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಲವು ದಶಕಗಳ ಕಾಲದ ನಿಲ್ದಾಣ ಇದಾಗಿದ್ದು, ಇತ್ತೀಚೆಗೆ ತಾತ್ಕಾಲಿಕವಾಗಿ ಶೆಲ್ಟರ್ ಮಾತ್ರ ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.
ಒಂದು ವರ್ಷದ ಅವಧಿಯಲ್ಲಿ ನಿಲ್ದಾಣದ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಸಚಿವರು ತಿಳಿಸಿದರು. ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ಕಾಮಗಾರಿಯಲ್ಲಿ ಮುಖ್ಯ ಕಟ್ಟಡ, ಮಹಿಳೆಯರಿಗೆ ವಿಶ್ರಾಂತಿ ಗೃಹ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ, ಆವರಣದಲ್ಲಿ ಕಾಂಕ್ರೀಟ್ ಅಳವಡಿಸುವುದು, ಬಸ್‌ಗಳ ನಿಲುಗಡೆಗೆ ನಾಲ್ಕು ಅಂಕಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಕೆಲಸ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಮುಖ್ಯ ಕಟ್ಟಡದ ನೆಲಹಾಸಿಗೆ ಗ್ರಾನೈಟ್ ಅಳವಡಿಸುವುದು, ಉಪಾಹಾರ ಗೃಹ ಮತ್ತು ವಾಣಿಜ್ಯ ಮಳಿಗೆಗಳು, ಸಿಬ್ಬಂದಿ ವಿಶ್ರಾಂತಿ ಕೊಠಡಿ ಹಾಗೂ ಸಂಚಾರ ನಿಯಂತ್ರಣಾ ಕೊಠಡಿ, ಮೊದಲನೇ ಮಹಡಿಯಲ್ಲಿ ಕಚೇರಿ ಉಪಯೋಗಕ್ಕಾಗಿ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದರು.
ನಗರ ಸಾರಿಗೆ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಹೆಚ್ಚುವರಿ ಬಸ್ ಖರೀದಿ ಮಾಡಲಾಗುತ್ತಿದ್ದು, ಇದರಿಂದ ಬಸ್‌ಗಳ ಕೊರತೆ ನೀಗಲಿದೆ. ಅಂದಾಜು 50 ವರ್ಷಗಳ ಹಳೆಯದಾದ ಧಾರವಾಡದ ಸಿಬಿಟಿಯನ್ನು ಇದೀಗ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು, ಧಾರವಾಡ ಸಿಬಿಟಿ ಮಾತ್ರವಲ್ಲದೇ, ₹23.48 ಕೋಟಿಗಳಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ಕಾರ್ಮಿಕ ಸಚಿವ ಹಾಗೂ ಧಾರವಾಡ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿದರು. ಶಾಸಕ ಎನ್.ಎಚ್. ಕೋನರಡ್ಡಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಹಾಗೂ ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))