ಸಾರಾಂಶ
ಶಿರಹಟ್ಟಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಂ. ೧೪ ಹುಬ್ಬಳ್ಳಿ ಉಪ ವಿಭಾಗ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಡಿಯಲ್ಲಿ ₹೩ ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆ ಕಚೇರಿ ಇರಬೇಕು ಎಂದು ಸರ್ಕಾರದ ಆದೇಶವಿದೆ. ಅದರಂತೆ ಶಿರಹಟ್ಟಿ ತಾಲೂಕಿನಲ್ಲಿಯೂ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ನಿಗದಿತ ಅವಧಿಯೊಳಗೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.ಅಗ್ನಿ ದುರಂತಗಳನ್ನು ಸಮರ್ಥವಾಗಿ ಎದುರಿಸಲು, ಜನರ ಪ್ರಾಣ ರಕ್ಷಣೆ ಮಾಡಲು ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಮತ್ತು ಸಿಬ್ಬಂದಿ ಕಾರ್ಯ ಶ್ಲಾಘನೀಯವಾದುದು. ಈ ಕಾರ್ಯ ನಿರ್ವಹಿಸುವವರಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಬಹುದಿನಗಳಿಂದ ಬೇಡಿಕೆ ಇತ್ತು. ಅದು ಈಗ ಕೂಡಿಬಂದಂತಾಗಿದೆ ಎಂದರು.
ಹಲವು ವರ್ಷಗಳ ಬೇಡಿಕೆಯಾದ ಪಟ್ಟಣದ ೧೦೦ ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಈಗಾಗಲೇ ಟೆಂಡರ್ ಕರೆಯಲು ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಅದು ಕೂಡ ನೆರವೇರಲಿದೆ. ಜನರ ನಿರೀಕ್ಷೆಗೆ ತಕ್ಕಂತೆ ಪ್ರತಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾಮಗಾರಿ ಕ್ರಿಯಾ ಯೋಜನೆ ಅಂದಾಜು ಪಟ್ಟಿ ಪ್ರಕಾರ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಕಾಮಗಾರಿ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವ ವಿವಿಧ ಕಾಮಗಾರಿಗಳು, ಮೂಲಭೂತ ಸೌಕರ್ಯಗಳ ಕಾಮಗಾರಿಯ ಗುಣಮಟ್ಟ ಉತ್ಕೃಷ್ಟವಾಗಿರುವಂತೆ ಎಚ್ಚರಿಕೆ ವಹಿಸಬೇಕು. ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಈ ಕ್ಷೇತ್ರದ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಅಗ್ನಿಶಾಮಕ ಇಲಾಖೆ ಅಧಿಕಾರಿ ಮಂಜುನಾಥ ಸಾಲಿ, ಆರ್.ಬಿ. ಮುಂಡೇವಾಡಗಿ, ಎನ್.ಕೆ. ಹರೀಶಕುಮಾರ, ಮಿಥುನಕುಮಾರ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕೀರೇಶ ರಟ್ಟಿಹಳ್ಳಿ, ಅಶೋಕ ವರವಿ, ಬಿಜೆಪಿ ಒಬಿಸಿ ತಾಲೂಕು ಘಟಕದ ಅಧ್ಯಕ್ಷ ರಾಮಣ್ಣ ಕಂಬಳಿ, ತಾಲೂಕು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಕಬರಸಾಬ್ ಯಾದಗಿರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ನಂದಾ ಪಲ್ಲೇದ, ತಿಪ್ಪಣ್ಣ ಲಮಾಣಿ, ಪರಸು ಡೊಂಕಬಳ್ಳಿ ಇದ್ದರು.