ಪಶು ವೈದ್ಯರ ಕೊರತೆ ನೀಗಿಸಲು ಕ್ರಮ: ಗುಂಡೂರಾವ್‌

| Published : Jan 24 2024, 02:04 AM IST

ಸಾರಾಂಶ

ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಂಗಳೂರು ಕಾರ್ಯಾಲಯದ ನೂತನ ಕಟ್ಟಡ ಶಿಲಾನ್ಯಾಸವನ್ನು ಸಚಿವ ದಿನೇಶ್‌ ಗುಂಡೂರಾವ್‌ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಪಶು ವೈದ್ಯರ ಕೊರತೆ ನೀಗಿಸಲು ಸೂಕ್ತ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಂಗಳೂರು ಕಾರ್ಯಾಲಯದ ನೂತನ ಕಟ್ಟಡ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಪಶು ವೈದ್ಯರ ಕೊರತೆ ರಾಜ್ಯದಲ್ಲಿ ಬಹಳಷ್ಟಿದೆ. ಈ ಸಮಸ್ಯೆ ನೀಗಿಸಲು ಸರ್ಕಾರದ ಮಟ್ಟದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.ಪ್ರಪಂಚದಲ್ಲಿ ಇರುವ ಎಲ್ಲ ಪ್ರಾಣಿಗಳ ಪೈಕಿ ಮನುಷ್ಯರು ಶೇ.34ರಷ್ಟಿದ್ದರೆ, ಹಸು, ಕುರಿ ಇತ್ಯಾದಿ ಜಾನುವಾರುಗಳು ಶೇ.62ರಷ್ಟಿವೆ. ಉಳಿದ ಅಷ್ಟೂ ಪ್ರಾಣಿಗಳು ಇರೋದು ಕೇವಲ ಶೇ.4 ಮಾತ್ರ. ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯನು ಎಲ್ಲವನ್ನೂ ಹಿಡಿತಕ್ಕೆ ತೆಗೆದುಕೊಂಡಿರುವುದರಿಂದ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಗುಂಡೂರಾವ್ ಹೇಳಿದರು. ನೂತನ ಕಟ್ಟಡವನ್ನು ಇನ್ನೊಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಅವರು ಸೂಚಿಸಿದರು.ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಪ್ರಸ್ತುತ ಪಶು ವೈದ್ಯಕೀಯ ಕಾಲೇಜುಗಳ ಕೊರತೆಯಿದೆ. ಹಾಗಾಗಿ ವೈದ್ಯರ ಕೊರತೆಯೂ ಕಾಡುತ್ತಿದೆ. ಈ ಬಗ್ಗೆ ಸರ್ಕಾರ ಆಲೋಚನೆ ಮಾಡುವ ಸಮಯ ಸನ್ನಿಹಿತವಾಗಿದೆ ಎಂದು ಹೇಳಿದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್‌ಗಳಾದ ಎ.ಸಿ. ವಿನಯರಾಜ್‌, ಅನಿಲ್‌ ಕುಮಾರ್‌, ಭಾಸ್ಕರ ಮೊಯ್ಲಿ, ಪ್ರಮುಖರಾದ ಪ್ರೊ. ರಾಧಾಕೃಷ್ಣ, ಮೀನುಗಾರಿಕಾ ವಿವಿ ಡೀನ್‌ ಆಂಜನಪ್ಪ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಪಂ ಸಿಇಒ ಡಾ.ಆನಂದ್‌, ಇಲಾಖೆಯ ಆಡಳಿತ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ಶೆಟ್ಟಿ, ಇಲಾಖೆಯ ಇತರ ಅಧಿಕಾರಿಗಳು ಇದ್ದರು.