ಸಾರಾಂಶ
ಈ ಹಿಂದೆ ಅಂಬೇಡ್ಕರ್ ಸರ್ಕಲ್‌ನ ರಸ್ತೆ ಬದಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಯೋಜಿಸಲಾಗಿತ್ತು. ಇದಕ್ಕೆ ವಿವಿಧ ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೊನೆಗೂ ಮಣಿದ ಪಾಲಿಕೆ ಆಡಳಿತವು ರಸ್ತೆ ನಡುವೆ ಪ್ರತಿಮೆ ಸಹಿತ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಜ್ಯೋತಿ ಬಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸಹಿತ ವೃತ್ತ ನಿರ್ಮಾಣಕ್ಕೆ ಭಾನುವಾರ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕ ವೇದವ್ಯಾಸ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ (ಡಿ. 6)ಕ್ಕಿಂತ ಮೊದಲೇ ಈ ವೃತ್ತವನ್ನು ಲೋಕಾರ್ಪಣೆ ಮಾಡುವುದಾಗಿ ಮೇಯರ್ ಘೋಷಿಸಿದರು.ಈ ಹಿಂದೆ ಅಂಬೇಡ್ಕರ್ ಸರ್ಕಲ್‌ನ ರಸ್ತೆ ಬದಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಯೋಜಿಸಲಾಗಿತ್ತು. ಇದಕ್ಕೆ ವಿವಿಧ ದಲಿತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೊನೆಗೂ ಮಣಿದ ಪಾಲಿಕೆ ಆಡಳಿತವು ರಸ್ತೆ ನಡುವೆ ಪ್ರತಿಮೆ ಸಹಿತ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ.
ಗುದ್ದಲಿಪೂಜೆ ಬಳಿಕ ಮಾತನಾಡಿದ ಮೇಯರ್, ವಿವಿಧ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಸಿ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಅಂಬೇಡ್ಕರ್ ಪ್ರತಿಮೆ ಸಹಿತ ಸುಂದರ ವೃತ್ತ ನಿರ್ಮಿಸಲಾಗುವುದು. ಡಿ.6ರೊಳಗೆ ಉದ್ಘಾಟನೆ ನಡೆಸಲು ಉದ್ದೇಶಿಸಿದ್ದೇವೆ. ಅನುದಾನ ಸಂಗ್ರಹ ಸಮಸ್ಯೆಯಾದರೆ, ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಜವಾಬ್ದಾರಿ ತನ್ನದು ಎಂದರು.ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಇಲ್ಲಿದ್ದ ಅಂಬೇಡ್ಕರ್ ವೃತ್ತವನ್ನು ಹಿಂದೆ ರಸ್ತೆ ಅಭಿವೃದ್ಧಿ ವೇಳೆ ತೆಗೆಯಲಾಗಿತ್ತು. ಇದೀಗ ಮತ್ತೆ ವೃತ್ತ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದೆ. ಈ ಕುರಿತಾಗಿ ಇದ್ದ ಭಿನ್ನಾಭಿಪ್ರಾಯಗಳು ಕೂಡ ದೂರವಾಗಿ ವೃತ್ತ ಅತಿ ಶೀಘ್ರ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಎಂಎಲ್ಸಿ ಹರೀಶ್ ಕುಮಾರ್ ಕೆ., ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಸದಸ್ಯರಾದ ಎ.ಸಿ.ವಿನಯರಾಜ್, ನವೀನ್ ಡಿಸೋಜ, ಶಶಿಧರ ಹೆಗ್ಡೆ, ಮುಖಂಡರಾದ ಎಸ್.ಅಪ್ಪಿ, ದೇವದಾಸ್, ಲೋಲಾಕ್ಷ, ಅಶೋಕ ಕೊಂಚಾಡಿ ಮತ್ತಿತರರಿದ್ದರು.ನಾಮಕರಣ ಆಗಬೇಕಿದೆ:
ಅಂಬೇಡ್ಕರ್ ವೃತ್ತಕ್ಕೆ ಈ ಹಿಂದೆ ನಾಮಕರಣ ನಡೆದಿರುವ ಕುರಿತು ಪಾಲಿಕೆಯಲ್ಲಿ ದಾಖಲೆ ಇಲ್ಲ. ಕಾಮಗಾರಿ ಆರಂಭಿಸುವ ಮೊದಲು ಅದಕ್ಕೆ ರಾಜ್ಯ ಸರ್ಕಾರದ ನೋಟಿಫೈ ಆಗಬೇಕಿದೆ. ಮುಂದಿನ ಪಾಲಿಕೆ ಕೌನ್ಸಿಲ್‌ನಲ್ಲಿ ಕರಡು ಅನುಮೋದನೆ ಪಡೆದು ಅಂತಿಮ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಫೈಲ್ ಕಳುಹಿಸಲಾಗುವುದು. ಬಳಿಕ ಸ್ಮಾರ್ಟ್ ಸಿಟಿ ಯೋಜನೆಯಡಿ ಉದ್ದೇಶಿತ ರೀತಿಯಲ್ಲಿ ಅಂಬೇಡ್ಕರ್ ವೃತ್ತದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ತಿಳಿಸಿದ್ದಾರೆ.