ಸಾರಾಂಶ
ವಿಜಯರಾಘವ ಪಡುವೆಟ್ನಾಯರ ಕನಸಾಗಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕೆ 17ರಂದು ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸುವುದೆಂದು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರ ಕನಸಾಗಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕೆ 17ರಂದು ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸುವುದೆಂದು ನಿರ್ಧರಿಸಲಾಗಿದೆ.ಸುಮಾರು ರು. 3 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ (ವಿಜಯ)ರಾಜ ಗೋಪುರ ವನ್ನು ಭಕ್ತಾದಿ ದಾನಿಗಳ ಸಹಾಯದಿಂದ ಪೂರ್ಣಗೊಳಿಸಿ, ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಮರ್ಪಿಸುವ ಸಂಕಲ್ಪ ಹೊಂದಲಾಗಿದೆ ಎಂದು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದ್ದಾರೆ.
ಸೋಮವಾರ, ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ರಾಜಗೋಪುರ ನಿರ್ಮಾಣ ಸಮಿತಿ ಉಪಾಧ್ಯಕ್ಷ ಮೋಹನ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.ದೇವಸ್ಥಾನ ಮುಂಭಾಗದಲ್ಲಿ ಶಿಲಾನ್ಯಾಸ ನೆರವೇರಿಸಿ ಬಳಿಕ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕ ಹರೀಶ್ ಪೂಂಜ, ಪ್ರತಾಪಸಿಂಹನಾಯಕ್, ಮಾಜಿ ಶಾಸಕ ಹರೀಶ್ ಕುಮಾರ್ ಹಾಗು ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಭಾಗವಹಿಸುವರು ಎಂದರು.
ರಾಜಗೋಪುರ ನಿರ್ಮಾಣದ ರಶೀದಿ ಪುಸ್ತಕ ಹಾಗು ಕೂಪನ್ ಬಿಡುಗಡೆಗೊಳಿಸಲಾಗುವುದು ಎಂದು ತಿಳಿದರು.ಮೆರವಣಿಗೆ ನಿರ್ವಹಣೆ, ಸಭಾಲಂಕಾರ, ಸಭಾ ನಿರ್ವಹಣೆ, ಆಮಂತ್ರಣ ಪತ್ರಿಕೆ ಹಂಚಿಕೆ, ಅನ್ನಸಂತರ್ಪಣೆ ನಿರ್ವಹಣೆ ಮೊದಲಾದ ಕಾರ್ಯಗಳಿಗೆ ಜವಾಬ್ದಾರಿ ನಿರ್ವಹಿಸಿಕೊಡಲಾಯಿತು. ಗ್ರಾಮಸ್ಥರು ಸೇರಿದ ಸಮಾಲೋಚನಾ ಸಭೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಲಹೆ, ಸೂಚನೆ ,ಅಭಿಪ್ರಾಯಗಳ ವಿನಿಮಯ ನಡೆಯಿತು.
ರಾಜಗೋಪುರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಕೋಶಾಧಿಕಾರಿ ರಾಜೇಶ್ ಪೈ, ಸಂಚಾಲಕ ಮೋಹನ ಕುಮಾರ್, ಪಾಂಡುರಂಗ ಬಾಳಿಗಾ ಇದ್ದರು. ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ವರ್ತಕ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಭರತ್ ಕುಮಾರ್, ಜಯಂತ ಶೆಟ್ಟಿ ಕುಂಟಿನಿ, ಸಂಜೀವ ಕೆ, ರವಿ ಚಕ್ಕಿತ್ತಾಯ, ಅರುಣಕುಮಾರ್ ಎಂ.ಎಸ್., ಪರಾರಿ ವೆಂಕಟ್ರಮಣ ಹೆಬ್ಬಾರ್ , ಪ್ರಕಾಶ ಕುದ್ದಣ್ಣಾಯ, ಪ್ರಕಾಶ್ ಗೌಡ ಅಪ್ರಮೇಯ, ಪ್ರಶಾಂತ್ ಜೈನ್ , ರವೀಂದ್ರ ಶೆಟ್ಟಿ ಬಳಂಜ, ಮಹೇಶ್ ಕನ್ಯಾಡಿ, ಡಾ.ಶ್ರೀಧರ ಭಟ್, ಅಶೋಕ ಕುಮಾರ್, ಬಾಲಕೃಷ್ಣ ಶೆಟ್ಟಿ, ದೇವಪ್ಪ ಗೌಡ, ರಾಮಣ್ಣ ಗೌಡ, ರಾಮಚಂದ್ರ ಶೆಟ್ಟಿ, ಅಜೇಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು.