4 ತಿಂಗಳಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಶಿಲಾನ್ಯಾಸ: ಶಾಸಕ ಅಶೋಕ್‌ ರೈ

| Published : Oct 17 2025, 01:03 AM IST

4 ತಿಂಗಳಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಶಿಲಾನ್ಯಾಸ: ಶಾಸಕ ಅಶೋಕ್‌ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿಯ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡಕ್ಕೆ ಮಂಗಳವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಪುತ್ತೂರು: ಸುಮಾರು ರು. ೭ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪರಿಶಿಷ್ಟ ಜಾತಿಯ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡಕ್ಕೆ ಮಂಗಳವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅಶೋಕ್ ರೈ, ಬನ್ನೂರಿನಲ್ಲಿ ೭ ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ಹಾಸ್ಟೆಲ್ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಇದಕ್ಕಾಗಿ ಶಿಲಾನ್ಯಾಸ ನೆರವೇರಿಸಲಾಗಿದೆ. ಪುತ್ತೂರಿನಲ್ಲಿ ೯ ಹಾಸ್ಟೆಲ್‌ಗಳಿದ್ದು ಈ ಪೈಕಿ ಹಿರೇಬಂಡಾಡಿಯಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ರು. ೨೨ ಕೋಟಿ ಅನುದಾನ ಮಂಜೂರುಗೊಂಡಿದೆ. ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮಂಜೂರುಗೊಳಿಸಲಾಗಿದೆ. ಮುಂದಿನ ಎರಡೂವರೆ ವರ್ಷದಲ್ಲಿ ಯೋಜನೆ ಕಾರ್ಯಗತಗೊಳಿಸಿ ಸಮಾಜಕ್ಕೆ ಅರ್ಪಿಸುವ ನಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ನಿರಂತರ ಮೌಲ್ಯಮಾಪನ ಕಾರ್ಯಗಳನ್ನು ನಡೆಸುತ್ತಿದ್ದೇನೆ ಎಂದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆಗೆ ರು. ೧೦೦೬ ಕೋಟಿ ಅನುದಾನ ಮಂಜೂರುಗೊಂಡು ಕಾಮಗಾರಿ ನಡೆಯುತ್ತಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿಗಾಗಿ ಪುಡಾದ ಅನುದಾನದಲ್ಲಿ ರು.೨.೫ ಕೋಟಿ ಅನುದಾನ ಮಂಜೂರುಗೊಳಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು ರು. ೯.೫ ಕೋಟಿಯಲ್ಲಿ ವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ. ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರಾತ್ರಿ ಆಟವಾಡಲು ಅನುಕೂಲವಾಗುವಂತೆ ರು. ೪ ಕೋಟಿ ವೆಚ್ಚದಲ್ಲಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿ ಜಿಮ್ ವ್ಯವಸ್ಥೆಗೆ ರು. ೧ ಕೋಟಿ ಮೀಸಲಿಡಲಾಗಿದೆ. ಅಲ್ಲದೆ ಪುತ್ತೂರು ನಗರದ ಬೊಳುವಾರು ಮತ್ತು ನಗರ ಸಂಪರ್ಕ ರಸ್ತೆಯಲ್ಲಿ ತಲಾ ರು. ೧ ಕೋಟಿ ವೆಚ್ಚದಲ್ಲಿ ೨ ಕಡೆಗಳಲ್ಲಿ ಸರ್ಕಲ್ ನಿರ್ಮಾಣ ಮಾಡಲಾಗುವುದು ಎಂದರು.

ಮಡಿಕಲ್‌ ಕಾಲೇಜಿಗೆ ಶಿಲಾನ್ಯಾಸ:

ಮುಂದಿನ ೪ ತಿಂಗಳ ಒಳಗಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಆಸ್ಪತ್ರೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗುವುದು. ಪುತ್ತೂರಿನಲ್ಲಿ ನಿರ್ಮಾಣಗೊಂಡಿರುವ ಕೋರ್ಟು ಕಟ್ಟಡಗಳ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸಲಿದ್ದು, ಈ ಸಂದರ್ಭ ಮುಖ್ಯಮಂತ್ರಿಗಳಿಂದ ಆಸ್ಪತ್ರೆಗೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ರು. ೧೦೦೦ ಕೋಟಿ ಬೇಡಿಕೆ ಸಲ್ಲಿಸಲಾಗಿದೆ. ಈ ಪೈಕಿ ಆಸ್ಪತ್ರೆ ನಿರ್ಮಾಣಕ್ಕೆ ರು. ೪೦೦ ಕೋಟಿ ಅನುದಾನ ಮಂಜೂರುಗೊಂಡಿದ್ದು, ಮುಖ್ಯಮಂತ್ರಿಗಳು ಆಸ್ಪತ್ರೆಗೆ ಶಿಲನ್ಯಾಸ ನಡೆಸಲಿದ್ದಾರೆ ಎಂದು ತಿಳಿಸಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ ಮಾತನಾಡಿದರು. ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಸಮಾಜ ಕಲ್ಯಾಣ ಅಧಿಕಾರಿ ಸುನಿತಾ, ಲೋಕೋಪಯೋಗಿ ಇಲಾಖೆಯ ರಾಜೇಶ್ ರೈ ಮತ್ತಿತರರು ಇದ್ದರು.