ಶಿಕ್ಷಕರ ನಿಧಿಯಿಂದ ₹50 ಲಕ್ಷಕ್ಕೂ ಹೆಚ್ಚು ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುತ್ತೇನೆ

ಹೂವಿನಹಡಗಲಿ: ತಾಲೂಕು ಕೇಂದ್ರದಲ್ಲಿ ಶಿಕ್ಷಕರ ಗುರು ಭವನ ನಿರ್ಮಾಣಕ್ಕಾಗಿ ಈಗಾಗಲೇ ₹10 ಲಕ್ಷಗಳ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ಮಾಡಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಗುರು ಭವನ ನಿರ್ಮಾಣಕ್ಕೆ ಇನ್ನು ಹೆಚ್ಚಿನ ಅನುದಾನ ಅಗತ್ಯವಿದ್ದು, ಶಿಕ್ಷಕರ ನಿಧಿಯಿಂದ ₹50 ಲಕ್ಷಕ್ಕೂ ಹೆಚ್ಚು ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುತ್ತೇನೆ. ಜತೆಗೆ ಮುಂದಿನ ಶಿಕ್ಷಕರ ದಿನಾಚರಣೆಯ ವ್ಯವಸ್ಥೆಯನ್ನು ನಾನೇ ಮಾಡುತ್ತೇನೆಂದು ಭರವಸೆ ನೀಡಿದರು.

ಹೂವಿನಹಡಗಲಿ ತಾಲೂಕು ಸತತ 2 ವರ್ಷಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಇದರಲ್ಲಿ ತಾಲೂಕಿನ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ರಮ ಮಹತ್ವದ್ದಾಗಿದೆ. ಹಿಂದುಳಿದ ಪ್ರದೇಶ, ಅದರಲ್ಲೂ ಅತಿ ಹಿಂದುಳಿದ ಕುಟುಂಬಗಳ ಮಕ್ಕಳ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತಮ ಅವಕಾಶ ದೊರೆತು ಅವರು ಉನ್ನತ ಹುದ್ದೆ ಅಲಂಕರಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ತಾಲೂಕಿನಲ್ಲಿ ಯಾವ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ ಎಂಬುದನ್ನು ಗುರುತಿಸಿ ಆ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.

ಬಿಇಒ ಮಂಗಳಾ ಕೆ. ಪ್ರಾಸ್ತಾವಿಕ ಮಾತನಾಡಿ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಬೋಧನೆ ಆರಂಭಿಸಿದೆ. ತಾಲೂಕಿನ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಇಒ ಪರಮೇಶ್ವರ ಮಾತನಾಡಿದರು.

ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎ. ಕೊಟ್ರಗೌಡ, ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಉತ್ತಂಗಿ ಆನಂದ, ಶಿಕ್ಷಕರಾದ ಶಿವಪ್ಪ, ಶಿವಲಿಂಗಪ್ಪ, ಬಸವರಾಜ, ಡಿ.ವಿರುಪಣ್ಣ, ಶೇಖ್‌ ಅಹಮದ್‌, ಶಿಕ್ಷಕಿಯರಾದ ಶ್ರೀಲತಾ, ರೇಣುಕಾ, ಗೀತಾ ಸೇರಿದಂತೆ ಇತರರಿದ್ದರು.