ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿಗೆ ಬಳಗೆರೆ ರಸ್ತೆಯಲ್ಲಿ ನಡೆದಿದ್ದ ರಾಜಸ್ಥಾನ ಮೂಲದ ದಲಾರಾಮ್ ಕೊಲೆ ಪ್ರಕರಣ ಸಂಬಂಧ ಅದೇ ರಾಜ್ಯದ ನಾಲ್ವರು ವ್ಯಾಪಾರಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ರಘುನಾಥ್, ಮಹೇಂದ್ರ, ಶರವಣ ಹಾಗೂ ಜಿತು ಪಟೇಲ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ವಿಕ್ರಂ ಹಾಗೂ ದಿನೇಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. 3 ದಿನಗಳ ಹಿಂದೆ ದಲಾರಾಮ್‌ನನ್ನು ಮಾತುಕತೆ ನೆಪದಲ್ಲಿ ಕರೆಸಿ ಆರೋಪಿಗಳು ಕೊಂದು ಪರಾರಿಯಾಗಿದ್ದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು ಬಾತ್ಮಿದಾರರ ಸುಳಿವು ಆಧರಿಸಿ ವ್ಯಾಪಾರಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರು ವ್ಯಾಪಾರಿಗಳಿಗೆ ಧಮ್ಕಿ:ರಾಜಸ್ಥಾನದ ದಲಾರಾಮ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಸ್ಥಳೀಯವಾಗಿ ಕಾನೂನುಬಾಹಿರ ಕೃತ್ಯಗಳಲ್ಲಿ ಆತ ತೊಡಗಿದ್ದ. ಸ್ಥಳೀಯ ಠಾಣೆಯಲ್ಲಿ ಆತನ ಮೇಲೆ ರೌಡಿಪಟ್ಟಿ ಸಹ ತೆರೆಯಲಾಗಿತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸಿ ಹಣ ಸಂಪಾದಿಸುವ ತನ್ನೂರಿನವರ ವ್ಯಾಪಾರಿಗಳನ್ನೇ ದಲಾರಾಮ್ ಗುರಿಯಾಗಿಸಿದ್ದ. ಹುಟ್ಟೂರಿಗೆ ಬಂದಾಗ ಬೆಂಗಳೂರಿನ ವ್ಯಾಪಾರಿಗಳಿಗೆ ಬೆದರಿಕೆ ಹಾಕಿ ಆತ ಹಣ ಸುಲಿಗೆ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.
ಇನ್ನು ಆರೋಪಿಗಳಿಗೆ ರಾಮ್ ಸಂಬಂಧಿ ಸಹ ಆಗಬೇಕು. ಎರಡು ವರ್ಷಗಳಿಂದ ಹಣಕ್ಕಾಗಿ ಬಂಧುಗಳಿಗೆ ಆತ ಕಾಟ ಕೊಡುತ್ತಿದ್ದ. ಎರಡು ವರ್ಷಗಳ ಹಿಂದೆ ರಘುನಾಥ್ ಮೇಲೆ ಆತ ಹಲ್ಲೆ ಕೂಡ ನಡೆಸಿದ್ದ. ಈ ಘಟನೆ ಬಳಿಕ ಹಗೆತನ ಹೆಚ್ಚಾಯಿತು. ಪದೇ ಪದೇ ಜೀವ ಬೆದರಿಕೆ ಕರೆಗಳಿಂದ ಕೆರಳಿದ ವ್ಯಾಪಾರಿಗಳು, ರಾಮ್‌ಗೆ ಹತ್ಯೆ ನಿರ್ಧರಿಸಿದರು. ಅಂತೆಯೇ ಇತ್ತೀಚಿಗೆ ತನ್ನ ಸೋದರ ಸಂಬಂಧಿ ಭೇಟಿಗೆ ನಗರಕ್ಕೆ ರಾಮ್ ಬಂದಿರುವ ಖಚಿತ ಮಾಹಿತಿ ಆರೋಪಿಗಳಿಗೆ ಸಿಕ್ಕಿತು. ಆಗ ತಮ್ಮ ಮೇಲೆ ಆತ ಹಲ್ಲೆ ನಡೆಸುವ ಮುನ್ನವೇ ಕೊಲೆಗೆ ಸಂಚು ರೂಪಿಸಿದರು. ಅದರಂತೆ ಶುಕ್ರವಾರ ರಾತ್ರಿ ಬಳಗೆರೆ ರಸ್ತೆ ಬಳಿಗೆ ಮಾತುಕತೆ ನೆಪದಲ್ಲಿ ಆರೋಪಿಗಳು ಕರೆಸಿದ್ದಾರೆ. ಈ ಆಹ್ವಾನದ ಮೇರೆಗೆ ಬಂದ ರಾಮ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದು ವ್ಯಾಪಾರಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಫ್ಯಾನ್ಸಿ ಸ್ಟೋರ್ಸ್ ಮಾಲಿಕರು
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಆರೋಪಿಗಳು ಫ್ಯಾನ್ಸಿ ಹಾಗೂ ಬ್ಯಾಂಗಲ್ಸ್ ಸ್ಟೋರ್ಸ್ ಇಟ್ಟಿದ್ದಾರೆ. ತಮ್ಮ ಜೀವಕ್ಕೆ ಕಂಟಕವಾದ ಕಾರಣಕ್ಕೆ ರಾಮ್ ಕೊಲೆಗೆ ಅವರು ತೀರ್ಮಾನಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
