ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೋಡುತ್ತಿದ್ದ ನಾಲ್ವರ ಬಂಧನ

| Published : Jul 02 2025, 01:47 AM IST

ಸೈಬರ್ ವಂಚಕರಿಗೆ ನಕಲಿ ಬ್ಯಾಂಕ್ ಖಾತೆ ತೆರೆದು ಕೋಡುತ್ತಿದ್ದ ನಾಲ್ವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರಿಗೆ ಹಣದಾಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆ ಜಾಲಕ್ಕೆ ಪೂರೈಸುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1 ಲ್ಯಾಪ್‌ಟಾಪ್, 4 ವಿವಿಧ ಕಂಪನಿಯ ಮೊಬೈಲ್‌ಗಳು ಹಾಗೂ ವಿವಿಧ ಬ್ಯಾಂಕ್‌ನ ಚೆಕ್ ಪುಸ್ತಕಗಳನ್ನು ಮುಟ್ಟುಗೋಲು ಹಾಕಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರ್ವಜನಿಕರಿಗೆ ಹಣದಾಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ವಂಚನೆ ಜಾಲಕ್ಕೆ ಪೂರೈಸುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1 ಲ್ಯಾಪ್‌ಟಾಪ್, 4 ವಿವಿಧ ಕಂಪನಿಯ ಮೊಬೈಲ್‌ಗಳು ಹಾಗೂ ವಿವಿಧ ಬ್ಯಾಂಕ್‌ನ ಚೆಕ್ ಪುಸ್ತಕಗಳನ್ನು ಮುಟ್ಟುಗೋಲು ಹಾಕಲಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಛತ್ರದ ಹೊಸಹಳ್ಳಿ ಗ್ರಾಮದ ಎನ್‌.ಲಕ್ಷ್ಮೀಶ್ ಅಲಿಯಾಸ್ ರಾಜೇಶ್‌, ಕನಕಪುರ ರಸ್ತೆಯ ತಾತಗುಣಿಯ ಅಗರದ ನಿವಾಸಿ ಪ್ರಕಾಶ್, ಜೆ.ಪಿ.ನಗರ 7ನೇ ಹಂತದ ಸಂತೃಪ್ತಿ ನಗರದ ಸುನೀಲ್ ಕುಮಾರ್‌ ಹಾಗೂ ರಾಮನಗರದ ಅರ್ಚಕರಹಳ್ಳಿಯ ಪುಟ್ಟಸ್ವಾಮಯ್ಯ ಬಂಧಿತರಾಗಿದ್ದು, ಈ ಜಾಲದ ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ಅವರ ಹೆಸರಿನಲ್ಲಿ ನೂರಾರು ನಕಲಿ ಕಂಪನಿಗಳನ್ನು ರಾಜ್ಯ ಸಣ್ಣ ಕೈಗಾರಿಕಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಆರೋಪಿಗಳು ನೊಂದಣಿ ಮಾಡಿಸಿದ್ದರು. ಆನಂತರ ರೈತರು, ಕಾರ್ಮಿಕರು ಹಾಗೂ ಇತರೆ ಜನರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಸಹ ತೆರೆದಿದ್ದರು. ಈ ಖಾತೆಗಳಿಂದ ಸೈಬರ್ ವಂಚನೆ ಜಾಲದಲ್ಲಿ ಹಣವನ್ನು ಅಕ್ರಮ ವರ್ಗಾವಣೆಯಾಗಿದೆ. ಈಗ ಅಲ್ಪ ಪ್ರಮಾಣದ ಹಣವು ಜಪ್ತಿಯಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಬಯಲಾಗಿದ್ದು ಹೇಗೆ?:

ಕಳೆದ ವರ್ಷ ಸೈಬರ್ ವಂಚನೆ ಪ್ರಕರಣದಲ್ಲಿ ತಾತಗುಣಿಯ ಪ್ರಕಾಶ್‌ನನ್ನು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದ ತನಿಖೆ ವೇಳೆ ನಕಲಿ ಕಂಪನಿ ಹಾಗೂ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಈ ವಿಚಾರ ತಿಳಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಚಂದ್ರಗುಪ್ತ ಅವರು, ಈ ನಕಲಿ ಖಾತೆಗಳ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿ ಪ್ರತ್ಯೇಕ ತನಿಖೆ ಸೂಚಿಸಿದ್ದರು. ಅಂತೆಯೇ ತನಿಖೆಗಿಳಿದ ಸಿಸಿಬಿ ತಂಡವು, ಪ್ರಕಾಶ್‌ ಸಂಪರ್ಕ ಜಾಲವನ್ನು ಶೋಧಿಸಿದಾಗ ಆತನ ಮೂವರು ಸ್ನೇಹಿತರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ನಾಲ್ವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಕಮಿಷನ್‌ ಆಸೆಗೆ ಸೈಬರ್ ವಂಚಕರ ಜತೆ ಅವರು ಕೈ ಜೋಡಿಸಿದ್ದರು.

ಖಾತೆ ತೆರೆಯಲು ₹10 ಸಾವಿರ:

ಬ್ಯಾಂಕ್‌ನಲ್ಲಿ ರೈತರು, ಕಾರ್ಮಿಕರು ಹಾಗೂ ಸಂಬಂಧಿಕರು ಸೇರಿದಂತೆ ನೂರಾರು ಜನರಿಂದ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಖಾತೆಗಳನ್ನು ಆರೋಪಿಗಳು ತೆರೆಸಿದ್ದರು. ಪ್ರತಿ ಖಾತೆದಾರನಿಗೆ ₹20 ಸಾವಿರ ಹಣವನ್ನು ಅವರು ಕೊಟ್ಟಿದ್ದರು. ಆ ನಂತರ ಈ ಬ್ಯಾಂಕ್ ಖಾತೆಗಳ ಪಾಸ್‌ವರ್ಡ್ ಸೇರಿದಂತೆ ವಿವರವನ್ನು ಸೈಬರ್ ವಂಚಕರಿಗೆ ಈ ನಾಲ್ವರು ರವಾನಿಸಿದ್ದರು. ಈ ಖಾತೆಯಿಂದ ಹಣ ವರ್ಗಾವಣೆಗೆ ಇಂತಿಷ್ಟು ಕಮಿಷನ್‌ ಆರೋಪಿಗಳಿಗೆ ಸಂದಾಯವಾಗುತ್ತಿತ್ತು. ಅಂದರೆ 1 ಲಕ್ಷ ರು ಹಣ ವಹಿವಾಟು ನಡೆದರೆ ₹4 ರಿಂದ ₹5 ಸಾವಿರ ಕಮಿಷನ್ ಸಿಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಲ್ಲಿ ಮೈಂಡ್‌ಗಳು:ಈ ನಾಲ್ವರು ಆರೋಪಿಗಳು ಸೈಬರ್ ವಂಚನೆ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆಗಳನ್ನು ಪೂರೈಸುತ್ತಿದ್ದರು. ಆದರೆ ಸೈಬರ್ ವಂಚನೆ ಕೃತ್ಯದಲ್ಲಿ ನೇರವಾಗಿ ಇವರ ಪಾತ್ರ ಕಂಡು ಬಂದಿಲ್ಲ. ಮೋಸದ ಕೃತ್ಯದಲ್ಲಿ ಸಂಪಾದಿಸಿದ ಹಣದ ವರ್ಗಾವಣೆಗೆ ಆರೋಪಿಗಳು ಸಹಕರಿಸಿದ್ದಾರೆ. ಇನ್ನು ಈ ನಾಲ್ವರು ಆರೋಪಿಗಳಿಗೆ ಚೀನಾ ಹಾಗೂ ಥೈಲ್ಯಾಂಡ್‌ನ ಕೆಲ ವ್ಯಕ್ತಿಗಳ ಜತೆ ನಿರಂತರ ಸಂಪರ್ಕವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ನಕಲಿ ಖಾತೆಗಳನ್ನು ತೆರೆಯಲು ಆರೋಪಿಗಳಿಗೆ ಕೆಲ ಬ್ಯಾಂಕ್ ಉದ್ಯೋಗಿಗಳು ಸಹಕಾರ ಕೊಟ್ಟಿದ್ದಾರೆ. ಆದರೆ, ಈಗ ಅವರು ಕೆಲಸ ತೊರೆದು ನಾಪತ್ತೆಯಾಗಿದ್ದಾರೆ.

₹150 ಕೋಟಿ ವರ್ಗಾವಣೆ, 357 ಖಾತೆಗಳು ಪತ್ತೆ:

ಈ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡು ಸೈಬರ್ ವಂಚಕರು ಕೋಟ್ಯಾಂತ ರು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಶಂಕೆ ಇದೆ. ಇದುವರೆಗೆ ಸುಮಾರು 150 ಕೋಟಿ ರು. ಹಣದ ವಹಿವಾಟಿನ ಬಗ್ಗೆ ಮಾಹಿತಿ ಇದ್ದು, ದೇಶಾದ್ಯಂತ ಸೈಬರ್‌ ವಂಚನೆ ಪ್ರಕರಣಗಳಲ್ಲಿ ಆರೋಪಿಗಳಿಂದ ತೆರೆಯಲಾಗಿದ್ದ 337 ಬ್ಯಾಂಕ್‌ ಖಾತೆಗಳು ಬಳೆಯಾಗಿರುವುದು ಪತ್ತೆಯಾಗಿವೆ. ಅಲ್ಲದೆ ನ್ಯಾಷನಲ್‌ ಸೈಬರ್ ರಿಪೋರ್ಟಿಂಗ್ ಫೋರ್ಟಲ್‌ನಲ್ಲಿ (ಎನ್‌ಸಿಆರ್‌ಪಿ) ಸುಮಾರು 100ಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗಿರುವ ಕುರಿತು ಮಾಹಿತಿ ಸಿಕ್ಕಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಸೈಬರ್ ವಂಚಕರಿಗೆ ನಕಲಿ ಖಾತೆಗಳ ಪೂರೈಕೆ ಪ್ರಕರಣದಲ್ಲಿ ಕೆಲ ಬ್ಯಾಂಕ್‌ ಅಧಿಕಾರಿಗಳ ಪಾತ್ರವಿರುವುದು ಕಂಡು ಬಂದಿದೆ. ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಈ ನಕಲಿ ಬ್ಯಾಂಕ್‌ ಖಾತೆಗಳಲ್ಲಿ ನಡೆದಿರುವ ಕೋಟ್ಯಾಂತರ ಹಣದ ವಹಿವಾಟಿನ ಬಗ್ಗೆ ಸಹ ಪರಿಶೀಲಿಸಲಾಗುತ್ತಿದೆ. ದೇಶ ವ್ಯಾಪ್ತಿ ಆರೋಪಿಗಳ ಸಂಪರ್ಕ ಜಾಲವಿದೆ ಎಂದು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.