ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ

| Published : Jun 11 2024, 01:38 AM IST

ಸಾರಾಂಶ

ಅಕ್ರಮ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿ ಸುಮಾರು ₹೭.೯೧ ಲಕ್ಷ ಮೌಲ್ಯದ ೯ ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ತಿಳಿಸಿದರು.

ಹಾವೇರಿ:ಅಕ್ರಮ ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿ ಸುಮಾರು ₹೭.೯೧ ಲಕ್ಷ ಮೌಲ್ಯದ ೯ ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ತಿಳಿಸಿದರು.ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ನಾಗೇಂದ್ರನಮಟ್ಟಿ ೭ನೇ ಕ್ರಾಸ್‌ನ ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ, ಸುಭಾಸ್ ಸರ್ಕಲ್‌ನ ಫಾರೂಕ್‌ಅಹ್ಮದ್ ಕುಂಚೂರು, ಇಸ್ಮಾಯಿಲ್ ಮದರಸಾಬ್ ನದಾಫ, ಸಾಹೀಲ್ ಸಲೀಂ ಕರ್ಜಗಿ ಎಂಬ ನಾಲ್ಕು ಜನ ಆರೋಪಿತರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ದಿಳ್ಳೇಪ್ಪ ಅಳಲಗೇರಿ ಒರಿಸ್ಸಾ ರಾಜ್ಯದ ಸಿಲೇರೋ ಪಟ್ಟಣದಿಂದ ಸುಮಾರು ೯೯೦೦ ಗ್ರಾಂ ತೂಕದ ನಿಷೇಧಿತ ಅಕ್ರಮ ಗಾಂಜಾವನ್ನು ರೈಲಿನಲ್ಲಿ ಸಾಗಾಟ ಮಾಡಿಕೊಂಡು ತಂದಿದ್ದ. ಜೂ.೬ರ ಸಂಜೆ ವೇಳೆಯಲ್ಲಿ ಹಾವೇರಿ ರೈಲು ನಿಲ್ದಾಣಕ್ಕೆ ತೆರಳುವ ಬ್ರಿಡ್ಜ್ ಕೆಳಗಡೆ ಆರೋಪಿತರೆಲ್ಲರೂ ಗುಂಪುಗೂಡಿ ಅಕ್ರಮವಾಗಿ ತಂದಿದ್ದ ಗಾಂಜಾವನ್ನು ಪ್ಯಾಕೆಟ್ ರೂಪದಲ್ಲಿ ಸಿದ್ಧಪಡಿಸಿ ಸ್ಥಳೀಯವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಸಂಶಯ ವ್ಯಕ್ತಪಡಿಸಿ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಕಾಲಕ್ಕೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರು ಜಮೀನು ಕೆಲಸ, ಗ್ಯಾರೇಜ್ ಕೆಲಸ ಮಾಡಿಕೊಂಡಿದ್ದು, ಇದೇ ಮೊದಲ ಬಾರಿಗೆ ಯತ್ನಿಸಿರುವ ಮಾಹಿತಿ ಸಿಕ್ಕಿದ್ದು, ಇನ್ನು ಹೆಚ್ಚಿನ ಮಾಹಿತಿ ತನಿಖೆಯ ಆನಂತರ ತಿಳಿಯಲಿದೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಪ್ರಕರಣದ ಕಾರ್ಯಾಚರಣೆ ತಂಡದಲ್ಲಿ ಹಾವೇರಿ ಶಹರ ಠಾಣೆಯ ತನಿಖಾಧಿಕಾರಿ ರಘು ಟಿ., ಸಿಬ್ಬಂದಿ ಎಂ.ಜಿ. ಯರೇಶಿಮಿ, ಮುತ್ತು ಲಮಾಣಿ, ಕೆ.ಬಿ. ಮುದಿಯಮ್ಮನವರ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜು, ಎಂ.ಎಸ್. ಮೆಣಸಕ್ಕನವರ, ಚಂದ್ರಕಾಂತ ಎಲ್.ಆರ್., ಮಾಲತೇಶ ಕಬ್ಬೂರ, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟೆ ಪಾಲ್ಗೊಂಡಿದ್ದು, ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ಹಾವೇರಿ ಉಪ ವಿಭಾಗದ ಡಿವೈಎಸ್ಪಿ ಗಣೇಶ ಕೆ.ಎಲ್., ಶಹರ ಪೊಲೀಸ್ ಠಾಣೆ ಸಿಪಿಐ ಮೋತಿಲಾಲ್ ಪವಾರ ಇದ್ದರು.