ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ನೀರುಪಾಲು

| Published : Feb 24 2025, 12:35 AM IST

ಸಾರಾಂಶ

ಭಾನುವಾರವಾದ್ದರಿಂದ ಗ್ರಾಮದ ದೊಡ್ಡಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿನ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಹಾವೇರಿ: ಕೆರೆಯಲ್ಲಿ ಈಜಲು ಹೋಗಿ ಎರಡು ಪ್ರತ್ಯೇಕ ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ.ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಒಂದು ಘಟನೆ ನಡೆದಿದ್ದು, ಗ್ರಾಮದ ಧನುಷ್ ಪ್ರಕಾಶ ಚೋಳಪ್ಪನವರ (೧೩) ಹಾಗೂ ನಿಖಿಲ್ ಜಗದೀಶ ನಾಗೋಜಿ (೧೧) ಮೃತಪಟ್ಟ ಬಾಲಕರು.ಧನುಷ್ ಮುಂಡಗೋಡದ ಲೊಯೊಲಾ ವಿಕಾಸ ಕೇಂದ್ರದ ಶಾಲೆಯಲ್ಲಿ ಓದುತ್ತಿದ್ದ. ನಿಖಿಲ್ ಕೊಪ್ಪರಸಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಭ್ಯಸಿಸುತ್ತಿದ್ದ.ಭಾನುವಾರವಾದ್ದರಿಂದ ಗ್ರಾಮದ ದೊಡ್ಡಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿನ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ರಾತ್ರಿ ಇಬ್ಬರು ಬಾಲಕರ ಅಂತ್ಯಕ್ರಿಯೆ ನೆರವೇರಿಸಲಾಯಿತು.ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದ ಗೌಡರ ಕೆರೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಗ್ರಾಮದ ಪ್ರಜ್ವಲ್ ಅನಿಲ್ ದೇವರಮನಿ (14) ಮತ್ತು ಸನತ್ ರಮೇಶ್ ಭೂಸರೆಡ್ಡಿ (14) ಎಂದು ಮೃತಪಟ್ಟಿದ್ದಾರೆ.

ಕೆರೆಯಲ್ಲಿ ಪ್ರಜ್ವಲ್ ದೇವರಮನಿ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಇನ್ನೋರ್ವ ಬಾಲಕ ಸನತ್ ಭೂಸರೆಡ್ಡಿಯ ಶವಕ್ಕಾಗಿ ಕಾರ್ಯಾಚರಣೆ ನಡೆದಿದೆ.ರೈತರ ಬೇಡಿಕೆ ಈಡೇರಿಕೆಗಾಗಿ ಇಂದು ಡಿಸಿ ಕಚೇರಿಗೆ ಮುತ್ತಿಗೆ

ಬ್ಯಾಡಗಿ: ಬೇಡ್ತಿ- ವರದಾ ನದಿ ಜೋಡಣೆ, ಹಾವೇರಿ ವಿಶ್ವವಿದ್ಯಾಲಯ ರದ್ದತಿ ವಾಪಸ್ ಪಡೆಯುವುದೂ ಸೇರಿದಂತೆ ಬೆಳೆಹಾನಿ ಪರಿಹಾರ, ಬೆಳೆವಿಮೆ, ಬಿಡುಗಡೆ, ನಿರಂತರ 7 ತಾಸು ತ್ರಿಫೇಸ್‌ ವಿದ್ಯುತ್ ಪೂರೈಕೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಫೆ. 24ರಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಾವೇರಿಯಲ್ಲಿ ಹಮ್ಮಿಕೊಂಡಿರುವ ರಸ್ತೆತಡೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಪ್ರತಿಭಟನೆಯಲ್ಲಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸುವಂತೆ ಜಿಲ್ಲಾ ಘಟಕದ ಪ್ರಧಾನ ಕಾರ‍್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನದಿಮೂಲದಿಂದ ರೈತರಿಗೆ ನೀರಾವರಿ ಸೌಲಭ್ಯಗಳಿಲ್ಲ. ಹೀಗಾಗಿ ಕೊಳವೆ ಬಾವಿಗಳನ್ನೇ ನೆಚ್ಚಿ ರೈತರು ಕೃಷಿ ನಡೆಸಬೇಕಾಗಿದ್ದು, ಇತ್ತೀಚೆಗೆ ಅಂತರ್ಜಲ ಮಟ್ಟದ ಕುಸಿತದಿಂದ ಯಾವುದೇ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೇಡ್ತಿ- ವರದಾ ನದಿ ಜೋಡಣೆ ಮಾಡಿಕೊಳ್ಳದೇ ರೈತರಿಗೆ ವಿಧಿಯಿಲ್ಲ ಎಂದರು.ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಪ್ರಸಕ್ತ ವರ್ಷ ಹಾವೇರಿ ವಿವಿಯಡಿ ಕಬಡ್ಡಿ, ಖೋಖೋ, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ಸೇರಿದಂತೆ ಬಹಳಷ್ಟು ಕ್ರೀಡೆಗಳಲ್ಲಿ ಜಿಲ್ಲೆಯ ನೂರಾರು ಕ್ರೀಡಾಪಟುಗಳಿಗೆ ಅವಕಾಶ ದೊರೆತಿದ್ದು, ನಯಾಪೈಸೆ ಕೊಡದೇ ‘ಬ್ಲೂ’ ಸೆಲೆಕ್ಷನ್ ಆಗಿದ್ದು, ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹಾವೇರಿ ವಿವಿ ಮುಚ್ಚಬಾರದು ಎಂದರು.

ಕಿರಣ ಗಡಿಗೋಳ ಮಾತನಾಡಿದರು. ಪ್ರಕಾಶ ಸಿದ್ದಪ್ಪನವರ, ಕೆ.ವಿ. ದೊಡ್ಡಗೌಡ್ರ ಸೇರಿದಂತೆ ಇತರರಿದ್ದರು.