ಸಾರಾಂಶ
ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ವಿದ್ಯುತ್ ಕಡಿತಗೊಂಡಿದೆ. ವಿವಿಧೆಡೆ ಜಮೀನಿನಲ್ಲಿ ಮರದ ಕೊಂಬೆ ಮುರಿದು ಬಿದ್ದಿದ್ದು ಬೆಳೆಹಾನಿಯಾದ ವರದಿಯಾಗಿದೆ.
ಕೊಪ್ಪಳ(ಯಲಬುರ್ಗಾ):
ಯಲಬುರ್ಗಾ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ಗುಡುಗು-ಸಿಡಿಲು ಸಮೇತ ಮಳೆಯಾಗಿದ್ದು ಮನೆಗಳ ಚತ್ತು ಹಾರಿ ಹೋಗಿವೆ. ಸಿಡಿಲಿಗೆ ನಾಲ್ಕು ಹಸು ಮೃತಪಟ್ಟಿವೆ.ತಾಲೂಕಿನ ಗುಳೆ ಗ್ರಾಮದಲ್ಲಿ ಹನುಮಂತಪ್ಪ ಕಂದಕೂರು, ತಿಪ್ಪಣ್ಣ ಬಡಗಿ ಅವರ ಮನೆಯ ಚತ್ತು ಬಿರುಗಾಳಿಗೆ ಹಾರಿ ಹೋಗಿದೆ. ಮನೆಯಲ್ಲಿದ್ದ ದವಸ-ಧಾನ್ಯ ನೀರು ಪಾಲಾಗಿವೆ. ತುಮ್ಮರಗುದ್ದಿಯ ಶಂಕ್ರಪ್ಪ ಚನಪನಹಳ್ಳಿ ಅವರಿಗೆ ಸೇರಿದ ಎರಡು ಹಸು, ಚಿಕ್ಕವಂಕಲಕುಂಟಾದ ನಾಗಪ್ಪ ಚಿಣಗಿ ಅವರ ಒಂದು ಆಕಳು, ಕುದರಿಕೊಟಗಿ ಗ್ರಾಮದಲ್ಲಿ ಚನ್ನಪ್ಪ ಎಂಬುವರಿಗೆ ಸೇರಿದ ಒಂದು ಆಕಳು ಸಿಡಿಲಿಗೆ ಬಲಿಯಾಗಿದೆ.
ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ವಿದ್ಯುತ್ ಕಡಿತಗೊಂಡಿದೆ. ವಿವಿಧೆಡೆ ಜಮೀನಿನಲ್ಲಿ ಮರದ ಕೊಂಬೆ ಮುರಿದು ಬಿದ್ದಿದ್ದು ಬೆಳೆಹಾನಿಯಾದ ವರದಿಯಾಗಿದೆ.ಪಪ್ಪಾಯಿ ಬೆಳೆ ಹಾನಿ:
ಮಳೆಯಿಂದ ತಾಲೂಕಿನ ಕಲಭಾವಿ ಗ್ರಾಮದ ಹನುಮಂತಪ್ಪ ಹುಣಸಿಹಾಳ ಅವರ ೫ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಮಳೆ-ಗಾಳಿಗೆ ಅಪಾರ ಹಾನಿಯಾಗಿದೆ. ವರ್ಷವಿಡಿ ಬೆಳೆದಿದ್ದ ಬೆಳೆ ಕಣ್ಣುದುರೆ ನಾಶವಾಗಿರುವುದನ್ನು ಕಂಡು ರೈತ ಕಣ್ಣೀರು ಸುರಿಸಿದ್ದಾರೆ. ಅದೇ ರೀತಿ ಕುದರಿಕೊಟಗಿಯಲ್ಲಿ ಗಾಳಿಗೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯವಾಗಿದೆ.