ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರುನಗರದ ರಾಯಚೂರು ರಸ್ತೆಯ ಹೊರವಲಯದಲ್ಲಿ ಇರುವ ವೈಷ್ಣವಿ ದೇವಿ ದೇವಸ್ಥಾನದ ಕ್ರಾಸ್ ಬಳಿ ಮಂತ್ರಾಲಯದಿಂದ ಬರುತ್ತಿದ್ದ ಕ್ರೂಷರ್ ಜೀಪ್ ಒಂದರ ಟೈರ್ ಬ್ಲಾಸ್ಟ್ ಎಕ್ಸೆಲ್ ಕಟ್ಟಾಗಿದ್ದರಿಂದ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ, ಒಬ್ಬರು ಖಾಸಗಿ ಆಸ್ಪತ್ರೆ ಮೃತಪಟ್ಟಿರುವ ಭೀಕರ ಘಟನೆ ಮಂಗಳ ವಾರ ರಾತ್ರಿ 10:30 ಸುಮಾರಿಗೆ ನಡೆದಿದೆ. ವಾಹನ ಚಾಲಕ ಜಂಸಾಲಿ ಶಿವ (24), ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಹಯವದನ ಕಟ್ಟಿ(18), ಸುಜೇಂದ್ರ (22) ಹಾಗೂ ಅಭಿಲಾಷ್(20) ಮೃತ ದುರ್ದೈವಿಗಳು. ಈ ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ಜಯಸಿಂಹನಿಗೆ ತೀವ್ರ ಗಾಯಗಳಾಗಿದ್ದು, ರಾಯಚೂರ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾಹನದಲ್ಲಿದ್ದ ಕೆಲ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಿಂಧನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬುಧವಾರ ಬೆಳಗ್ಗೆ ಬೆಳಗ್ಗೆ ಎಲ್ಲ ವಿದ್ಯಾರ್ಥಿಗಳನ್ನು ಮಂತ್ರಾಲಯಕ್ಕೆ ಕಳಿಸಲಾಗಿದೆ. 14 ಜನ ವಿದ್ಯಾರ್ಥಿಗಳು ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳಾಗಿದ್ದಾರೆ. ಇವರೊಂದಿಗೆ ಇನ್ನೂ ಮೂರು ಕ್ರೂಷರ್ ವಾಹನ ಗಳಲ್ಲಿ ಅದೇ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಕೆಲ ಅಧ್ಯಾಪಕರು ಹಂಪಿಯ ನರಹರಿ ತೀರ್ಥರ ಉತ್ತರ ಆರಾಧನೆಗೆ ತೆರಳುವಾಗ, ಈ ಭೀಕರ ರಸ್ತೆಯ ಅಪಘಾತ ಜರುಗಿರುವುದು ಎಲ್ಲರಲ್ಲೂ ತೀವ್ರ ಆಘಾತ ಉಂಟು ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಮಂತ್ರಾಲಯದಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ರಾತ್ರಿ ಎರಡು ಗಂಟೆ ಸುಮಾರಿಗೆ ಧಾವಿಸಿದರು.
ಈ ವೇಳೆ ಮಠದ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇರವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದ ಶವಗಳನ್ನು ವೀಕ್ಷಿಸಿ, ಅವರ ತಂದೆ-ತಾಯಿಗಳೊಂದಿಗೆ ಹಾಗೂ ಸಂಬಂಧಿಗಳೊಂದಿಗೆ ಮಾತನಾಡಿ, ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಕೆಲಸದಲ್ಲಿ ತೊಡಗಿದರು.ಈ ವೇಳೆ ಕೆಲ ಮೃತ ವಿದ್ಯಾರ್ಥಿಗಳ ಪಾಲಕರು ಹಾಗೂ ಸಂಬಂಧಿಕರು ವಿಷಯ ತಿಳಿದುಕೊಂಡು ಆಸ್ಪತ್ರೆಗೆ ಆಗಮಿಸಿದ್ದರು. ಆ ಎಲ್ಲಾ ಕುಟುಂಬಸ್ಥರೊಂದಿಗೆ ಸಿಬ್ಬಂದಿ ವರ್ಗ ಮಾತನಾಡಿ, ಧೈರ್ಯ ತುಂಬಿದ್ದು ಮನಕಲುಕುವಂತಿತ್ತು. ಸುಮಾರು ಎರಡು ತಾಸುಗಳ ಕಾಲ ನಿರಂತರವಾಗಿ ಮೃತ ದೇಹಗಳನ್ನು ಘಟನಾ ಸ್ಥಳದಿಂದ ಆಸ್ಪತ್ರೆಗೆ ನಿರಂತರವಾಗಿ ಶ್ರಮಿಸುತ್ತಿದ್ದ ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಹಾಗೂ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಕಾರವನ್ನು ವಿದ್ಯಾಪಾಠ ಶಾಲೆ ವಿದ್ಯಾರ್ಥಿಗಳಾದ ಅಭಿಷೇಕ ಶ್ರೀಕರ ನೆನೆದು ಭಾವುಕರಾದರು. ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬಿ.ಎಸ್.ತಳವಾರ್ ಪಿಐಗಳಾದ ದುರ್ಗಪ್ಪ ಡೊಳ್ಳಿನ ವೆಂಕಟೇಶ್ ಚೌಹಾನ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಮೃತ ದೇಹಗಳನ್ನು ಆಸ್ಪತ್ರೆಗೆ ಕರೆತರುವಲ್ಲಿ ಹಾಗೂ ಅಂಬುಲೆನ್ಸ್‌ಗಳ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕಳುಹಿಸುವಲ್ಲಿ ನೆರವಾದರು. ಈ ಘಟನೆ ನಡೆಯಬಾರದಾಗಿತ್ತು ಎಂದು ಮುಖಂಡರಾದ ವೆಂಕಣ್ಣ ಜೋಶಿ, ನರಸಿಂಹಾಚಾರ್ ಮಠಾಧಿಕಾರಿ, ನಬಿಸಾಬ್, ಆನಂದ ಗೌರಕರ ತೀವ್ರ ಕಳವಳ ವ್ಯಕ್ತಪಡಿಸಿದರು. ಮಂತ್ರಾಲಯ ಮಠದ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಕಲ ರೀತಿ ಬೆಂಬಲ: ಸುಬುಧೇಂದ್ರ ತೀರ್ಥ ಶ್ರೀಪಾದಂಗಳ ಭರವಸೆ
ಸಿಂಧನೂರು: ಇಲ್ಲಿನ ಬಳಿ ಮಂಗಳವಾರ ರಾತ್ರಿ ಆಕಸ್ಮಿಕವಾಗಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಹಾಗೂ ಚಾಲಕನ ಕುಟುಂಬಕ್ಕೆ ಮಂತ್ರಾಲಯ ಗುರುಪೀಠ ಸದಾ ಬೆಂಬಲಕ್ಕೆ ಇದೆ ಅವರಿಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಭರವಸೆ ನೀಡಿದರು.ಅವರು ಮಂಗಳವಾರ ರಾತ್ರಿ ಸಿಂಧನೂರಿನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ವಿಷಯದಂತೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದ ಹಾಗೂ ಉಳಿದ ವಾಹನ ಗಳಲ್ಲಿ ಇದ್ದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ನಂತರ ಮಾತನಾಡಿದರು.ಒಂದು ಹಂತದಲ್ಲಿ ಭಾವುಕರಾದ ಶ್ರೀಗಳು ಎಲ್ಲ ವಿದ್ಯಾರ್ಥಿಗಳ ರಕ್ಷಣೆ, ಅವರಿಗೆ ಅಧ್ಯಯನ ಕೊಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅವಶ್ಯಕತೆ ಇರುವವರಿಗೆ ಖಂಡಿತವಾಗಿಯೂ ತಜ್ಞವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು. ವಿದ್ಯಾರ್ಥಿಗಳ ಸಾವಿನ ಅಘಾತ ತಮಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು, ಅವರೆಲ್ಲ ಆರೋಗ್ಯವಾಗಿ ಇದ್ದಾರೆ.ಗಾಯಗೊಂಡವರಿಗೆ ಪೂರ್ಣವಾದ ಚಿಕಿತ್ಸೆ ಕೊಡಿಸಿ ಮಂತ್ರಾಲಯಕ್ಕೆ ಕಳುಹಿಸಿದ್ದೇವೆ. ಪಾಲಕರಿಗೂ ಮಾಹಿತಿ ತಿಳಿಸಿದ್ದೇವೆ ಎಂದರು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಜಯಸಿಂಹ ಎಂಬ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರಲ್ಲದೆ, ಅಪಘಾತದಲ್ಲಿ ಮೃತಪಟ್ಟವರ ಬೆಂಬಲಕ್ಕೆ ಶ್ರೀಮಠ ಆರ್ಥಿಕವಾಗಿ, ಸಾಮಾಜಿಕವಾಗಿ ಯಾವಾಗಲೂ ಇರುತ್ತೆ ಎಂದು ಶ್ರೀಗಳು ಅಭಯ ನೀಡಿದರು.