ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು?

| Published : Dec 11 2024, 12:47 AM IST

ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು?
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಶೃವಂತಿ ಗೋಪಾಲಪ್ಪ (15) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿಯರಾದ ದೀಕ್ಷಿತಾ (15), ಲಾವಣ್ಯ (15) ಹಾಗೂ ಲಿಪಿಕಾ (15) ಅವರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ.

ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಪೈಕಿ ಸಮುದ್ರದಲ್ಲಿ ಈಜಲು ತೆರಳಿದ ನಾಲ್ವರು ವಿದ್ಯಾರ್ಥಿನಿಯರು ಅಲೆಗಳ ರಭಸಕ್ಕೆ ನೀರಲ್ಲಿ ಕೊಚ್ಚಿ ಹೋಗಿದ್ದು, ಅದರಲ್ಲಿ ಓರ್ವ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರು ಕಣ್ಮರೆಯಾಗಿದ್ದಾರೆ. ಕೊಚ್ಚಿ ಹೋಗುತ್ತಿದ್ದ ಇನ್ನೂ ಮೂವರು ವಿದ್ಯಾರ್ಥಿನಿಯರನ್ನು ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಶೃವಂತಿ ಗೋಪಾಲಪ್ಪ (15) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿಯರಾದ ದೀಕ್ಷಿತಾ (15), ಲಾವಣ್ಯ (15) ಹಾಗೂ ಲಿಪಿಕಾ (15) ಅವರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಮೊರಾರ್ಜಿ ವಸತಿಶಾಲೆಯ 54 ವಿದ್ಯಾರ್ಥಿಗಳು ಮಂಗಳವಾರ ಶೈಕ್ಷಣಿಕ ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಆಗಮಿಸಿದ್ದರು.

ದೇವರ ದರ್ಶನ ಮುಗಿಸಿ ಸಂಜೆ 6 ಗಂಟೆ ಹೊತ್ತಿಗೆ ಸಮುದ್ರದಲ್ಲಿ ಈಜುವಾಗ 7 ವಿದ್ಯಾರ್ಥಿನಿಯರು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಆಳ ಸಮುದ್ರದಲ್ಲಿ ಮುಳುಗುತ್ತಿರುವಾಗ ಇದನ್ನು ಗಮನಿಸಿದ ಲೈಫ್‌ ಗಾರ್ಡ್‌ ಸಿಬ್ಬಂದಿ ನಾಲ್ವರನ್ನು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.

ಆ ಪೈಕಿ ವಿದ್ಯಾರ್ಥಿನಿ ಶೃವಂತಿ ಗೋಪಾಲಪ್ಪ(15) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಅಸ್ವಸ್ಥಗೊಂಡ ಉಳಿದ ಮೂವರು ವಿದ್ಯಾರ್ಥಿನಿಯರಾದ ಯಶೋದಾ(15) ವೀಕ್ಷಣಾ(15) ಹಾಗೂ ಲಿಪಿಕಾ(15) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುರುಡೇಶ್ವರ ಪಿಎಸ್ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ಕರಾವಳಿ ಪೊಲೀಸ್ ಪಡೆ ಕಣ್ಮರೆಯಾದ ವಿದ್ಯಾರ್ಥಿನಿಯರಿಗಾಗಿ ತೀವ್ರ ಶೋಧ ನಡೆಸುತ್ತಿದೆ.

ಸ್ಥಳಕ್ಕೆ ಎಸಿ ಡಾ. ನಯನಾ ಭೇಟಿ: ಮುರುಡೇಶ್ವರ ಸಮುದ್ರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದಾರೆ ಎನ್ನುವ ಸುದ್ದಿ ತಿಳಿದ ಸಹಾಯಕ ಆಯುಕ್ತೆ ಡಾ. ನಯನಾ ಮತ್ತು ತಹಸೀಲ್ದಾರ್‌ ಅಶೋಕ ಭಟ್ಟ ಅವರು ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು ಚಿಕಿತ್ಸೆಗೆ ದಾಖಲಾದ ಮುರುಡೇಶ್ವರ ಆರೆನ್ನೆಸ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಅದರಂತೆ ಇವರೊಂದಿಗೆ ಪ್ರವಾಸಕ್ಕೆ ಬಂದಿದ್ದ ವಸತಿಶಾಲೆಯ ಶಿಕ್ಷಕರಲ್ಲಿ ಉಳಿದ ವಿದ್ಯಾರ್ಥಿಗಳ ಕುರಿತು ಮಾಹಿತಿ ಕಲೆ ಹಾಕಿ ಅವರಿಗೆಲ್ಲರಿಗೂ ರಾತ್ರಿ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.