ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ನಾಲ್ಕು ಗ್ರಾಮ ಪಂಚಾಯ್ತಿಗಳು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತ ತೀರ್ಮಾನ ಕೈಗೊಳ್ಳಲಾಯಿತು.ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ಶಾಸಕ ಕೆ.ಎಂ.ಉದಯ್ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪುರಸಭೆಯನ್ನು ನಗರ ಸಭೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಚರ್ಚೆ ನಡೆಯಿತು.
ತಾಲೂಕಿನ ಸೋಮನಹಳ್ಳಿ, ಚಾಮನಹಳ್ಳಿ, ಗೊರವನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಗಳು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವಾಗ ತಮ್ಮ ಗ್ರಾಮ ಪಂಚಾಯ್ತಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂದು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮುಖ್ಯ ಅಧಿಕಾರಿ ಮೀನಾಕ್ಷಿ ಸಭೆಗೆ ತಿಳಿಸಿದರು.ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯರು ನಗರಸಭೆ ವ್ಯಾಪ್ತಿ ನಿಗದಿ ಜನ ಸಂಖ್ಯೆಯ ಅಂಕಿ-ಅಂಶಗಳ ಪಟ್ಟಿ ತಯಾರಿಸಿದ ನಂತರ ಸರ್ಕಾರಕ್ಕೆ ಪೂರ್ಣ ಪ್ರಮಾಣದ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಲು ಸದಸ್ಯರು ಸೂಚಿಸಿದರು.
ಪುರಸಭೆ ವ್ಯಾಪ್ತಿ ನಂದಿನಿ ಪಾರ್ಲರ್ ಮಾಲೀಕರು ನಿಗದಿತ ನೆಲ ಬಾಡಿಗೆ ಕಟ್ಟದೇ ಇರುವುದರಿಂದ ಹರಾಜಿನಲ್ಲಿ ಸುಂಕ ವಸೂಲಾತಿ ಹಕ್ಕು ಪಡೆದಿರುವ ನಮಗೆ ಆರ್ಥಿಕವಾಗಿ ನಷ್ಟ ಉಂಟಾಗಿದೆ. ಹೀಗಾಗಿ ಭದ್ರತಾ ಠೇವಣಿ ಹಿಂದಿರುಗಿಸುವಂತೆ ಬಿಡ್ಡುದಾರರಾದ ಮುರಳಿ ಹಾಗೂ ಜ್ಯೋತಿಷ್ ಸಲ್ಲಿಸಿದ ಮನವಿಯನ್ನು ಸಭೆ ಸರಾಸಗಟ್ಟಾಗಿ ತಿರಸ್ಕರಿಸಿತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಕ್ರಮ ವಹಿಸುವಂತೆ ಸದಸ್ಯರು ಸಲಹೆ ನೀಡಿದರು.ಪಟ್ಟಣ ವ್ಯಾಪ್ತಿಯ ಶಿವಪುರದ ಬಳಿ ಒಂದು ಎಕರೆ ಜಾಗದಲ್ಲಿ ಮಾಂಸದ ಮಾರುಕಟ್ಟೆ ಹಾಗೂ ಹಳೇ ಬಸ್ ನಿಲ್ದಾಣದ ಬಳಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡುವ ಸಂಬಂಧ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
2022-23ನೇ ಸಾಲಿನಲ್ಲಿ ಪುರಸಭಾ ಸದಸ್ಯರು ಅಧ್ಯಯನ ಪ್ರವಾಸದ ಹೆಸರಿನಲ್ಲಿ ಪ್ರವಾಸಿ ಏಜೆನ್ಸಿ ಮೂಲಕ ಚಂಡಿಘಡ ಪ್ರವಾಸ ತೆರಳಿದ್ದ ಬಗ್ಗೆ 15 ಲಕ್ಷ ರು. ವೆಚ್ಚ ಮಾಡಿದ್ದಾರೆ. ಪ್ರವಾಸದ ಉಸ್ತುವಾರಿ ವಹಿಸಿದ್ದ ಸದಸ್ಯ ಮಹೇಶ್ ಹೆಚ್ಚುವರಿಯಾಗಿ 3 ಲಕ್ಷ ರು. ಖರ್ಚು ಮಾಡಿದ್ದಾರೆ. ಆದರೆ, ನಿಖರವಾಗಿ ಖರ್ಚು ವೆಚ್ಚದ ಲೆಕ್ಕ ಕೊಡದ ಕಾರಣ ಆಡಿಟ್ ತನಿಖೆಯಲ್ಲಿ ಆಕ್ಷೇಪಣೆ ವ್ಯಕ್ತವಾಗಿದೆ. ಹೀಗಾಗಿ ಲೆಕ್ಕ ಪರಿಶೋಧಕರು ಪ್ರವಾಸಿ ಏಜೆನ್ಸಿ ಹಾಗೂ ಪ್ರವಾಸದ ಉಸ್ತುವಾರಿ ವಹಿಸಿದ್ದ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದ್ದಾರೆ ಎಂದು ಮುಖ್ಯ ಅಧಿಕಾರಿ ಮೀನಾಕ್ಷಿ ಸಭೆಗೆ ವಿವರಿಸಿದರು.ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷ ಟಿ. ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಸುರೇಶ್ ಕುಮಾರ್, ಎಂ.ಐ.ಪ್ರವೀಣ್, ಸಚಿನ್, ಮತ್ತಿತರರು ಇದ್ದರು.
ಪುರಸಭೆ ಜೆಡಿಎಸ್ ಸದಸ್ಯರಿಂದ ಸಭಾತ್ಯಾಗಮದ್ದೂರು:
ಪಟ್ಟಣ ವ್ಯಾಪ್ತಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ಜರುಗಿತು.ಪುರಸಭಾಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರಾದ ಪ್ರಿಯಾಂಕ ಅಪ್ಪು ಗೌಡ ಹಾಗೂ ಮಹೇಶ್ ಅವರು ಕುಡಿಯುವ ನೀರು, ಒಳಚರಂಡಿ ನಿರ್ಮಾಣ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳು ವಾರ್ಡ್ ಗಳಲ್ಲಿ ಸಮರ್ಪಕವಾಗಿ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವ ಬಗ್ಗೆ ಪ್ರಿಯಾಂಕ ಹಾಗೂ ಮಹೇಶ್ ಆಕ್ಷೇಪಣೆ ವ್ಯಕ್ತಪಡಿಸಿದರು.
ಮುಂದಿನ ಸಭೆಯಲ್ಲಿ ಎಲ್ಲಾ ಕಾಮಗಾರಿಗಳ ಬಗ್ಗೆ ಸೂಕ್ತ ಮಾಹಿತಿ ನೀಡುತ್ತೇವೆ ಎಂದು ಅಧ್ಯಕ್ಷ ಕೋಕಿಲ ಹಾಗೂ ಮುಖ್ಯ ಅಧಿಕಾರಿ ಮೀನಾಕ್ಷಿ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಸದಸ್ಯರು ಬೇಸರ ವ್ಯಕ್ತಪಡಿಸಿ ಸಭಾ ತ್ಯಾಗ ಮಾಡಿದರು.ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಉದಯ್ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ಸದಸ್ಯರಿಗೆ ನೀಡಬೇಕು. ಸೂಕ್ತ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಶಾಸಕರು ಮುಖ್ಯ ಅಧಿಕಾರಿ ಮೀನಾಕ್ಷಿ ಅವರಿಗೆ ತಾಕೀತು ಮಾಡಿದರು.