ಮಳೆಗೆ ಮನೆ ಕುಸಿದು ನಾಲ್ವರಿಗೆ ಗಾಯ

| Published : Aug 29 2025, 01:00 AM IST

ಸಾರಾಂಶ

ಮುದ್ದೇಬಿಹಾಳ ತಾಲೂಕಿನ ಅರೇಮುರಾಳ ಗ್ರಾಮದಲ್ಲಿ ಮನೆ ಕುಸಿದು ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕುಟುಂಬಕ್ಕೆ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಕುಟುಂಬಕ್ಕೆ ಪಡಿತರ ಕಿಟ್‌ ವಿತರಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಅರೇಮುರಾಳ ಗ್ರಾಮದಲ್ಲಿ ಮನೆಯೊಂದು ಕುಸಿದು ನಾಲ್ವರು ಗಾಯಗೊಂಡು ಸದ್ಯ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಘಟನೆ ಬುಧವಾರ ನಡೆದಿದೆ.

ಘಟನೆಯಲ್ಲಿ ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ, ರುಶಾಂತ ಬಂಡಿವಡ್ಡರ ಗಾಯಗೊಂಡವರು. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ ಕೀರ್ತಿ ಚಾಲಕ, ತಾಪಂ ಪ್ರಭಾರಿ ಕಾರ್ಯನಿರ್ವಾಹಕ ವೆಂಕಟೇಶ ವಂದಾಲ, ಗ್ರಾಪಂ ಪಿಡಿಒ ಕಲ್ಮೇಶ ಕುಂಬಾರ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಗಂಭೀರ ಗಾಯಗೊಂಡ ನಾಲ್ವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಗಾಯದ ಗಂಭೀರತೆ ಅರಿತು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಬಹುತೇಕ ಎಲ್ಲ ಸಾಮಗ್ರಿಗಳು, ದಿನಬಳಕೆ ವಸ್ತುಗಳು ನಾಶವಾಗಿವೆ. ಮಧ್ಯರಾತ್ರಿ ಘಟನೆ ನಡೆದಿದ್ದರೂ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆಯ ಯಾರೊಬ್ಬರೂ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಈ ವೇಳೆ ಶಾಸಕ ಹಾಗೂ ಕೆಎಸ್‌ಡಿಎಲ್‌ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಅರೇಮುರಾಳದಲ್ಲಿ ಮನೆ ಬಿದ್ದು ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಾತ್ರವಲ್ಲ, ನೊಂದ ಕುಟುಂಬಕ್ಕೆ ಧೈರ್ಯ ತುಂಬಿ, ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಡಿವಡ್ಡರ ಕುಟುಂಬವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಮನೆ ಬಿದ್ದ ಪರಿಣಾಮ ಗಾಯಗೊಂಡ ಕುಟುಂಬಕ್ಕೆ ಗುಣಮಟ್ಟ ಆರೋಗ್ಯ ಸೇವೆ ದೊರಕಿಸಲು ಸೂಚಿಸಲಾಗಿದೆ ಎಂದರು.

ಹಾನಿಯಾಗಿರುವ ದಿನಬಳಕೆ ವಸ್ತುಗಳು, ದಿನಸಿ ಕಿಟ್‌ಗಳು, ಹಾಸಿಗೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತುರ್ತಾಗಿ ಒದಗಿಸಲು ಸೂಚಿಸಲಾಗಿದೆ. ವಸತಿ ಯೋಜನೆಯಡಿಯಲ್ಲಿ ಮನೆ ಹಾಕಿ ಸೂರು ಒದಗಿಸಬೇಕು ಎಂದು ತಾಪಂ ಇಒ ವೆಂಕಟೇಶ ವಂದಾಲ ಅವರಿಗೆ ಮತ್ತು ಪ್ರಕೃತಿ ವಿಕೋಪದಡಿಯಲ್ಲಿ ಸರ್ಕಾರದಿಂದ ನಿಗದಿಪಡಿಸಿದ ಪರಿಹಾರ ನೀಡುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದೆ ಎಂದು ಹೇಳಿದರು.

ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಪಂ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಹೆಚ್ಚಿನ ನಿಗಾವಹಿಸಿ ಡಂಗೂರ ಸಾರಲು ಸೂಚಿಸಲಾಗಿದೆ ಎಂದರು.

ಘಟನಾ ಸ್ಥಳಕ್ಕೆ ನಡಹಳ್ಳಿ ಭೇಟಿ:

ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ತಾಲೂಕಿನ ಅರೇಮುರಾಳ ಗ್ರಾಮಕ್ಕೆ ಭೇಟಿ ನೀಡಿದರು. ಆದರೆ, ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳ ಮೇಲೆ ಕಿಡಿಕಾರಿದರು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು. ಬಳಿಕ ಘಟನೆಯಿಂದ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ಪಡಿತರ ಕಿಟ್‌ ವಿತರಿಸಿದರು.