ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಮನಾವರ್ ತಾಲೂಕಿನ ಉಕಲ್ಲಾ ನಡತ್ ಪುರ ಗ್ರಾಮದ ಅಸ್ಲಂಖಾನ್(36), ಖೇರವಾ ಗ್ರಾಮದ ಮುನೀರ್‌ಖಾನ್( 50), ಆಬ್ಯಾಖಾನ್ (44), ಸಡಕ್ ಪಾರ ಗ್ರಾಮದ ಶೇರು(35) ಬಂಧಿತರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಆರೂರು ಬಳಿಯ ಸಾಯಿ ಡೆಲಿಕೆಸಿ ಹೋಟೆಲ್‌ ಮುಂಭಾಗ ಕಳೆದ ಡಿ. 8ರಂದು ರಾತ್ರಿ ನಿಲ್ಲಿಸಿದ್ದ ಬಸ್ ನಲ್ಲಿ 55 ಲಕ್ಷ ರು.‌ ನಗದು ಮತ್ತು ದಾಖಲೆ ಪತ್ರಗಳ ಕಳವು ಮಾಡಿದ್ದ ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದು, ನಗದು ಹಾಗೂ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಮನಾವರ್ ತಾಲೂಕಿನ ಉಕಲ್ಲಾ ನಡತ್ ಪುರ ಗ್ರಾಮದ ಅಸ್ಲಂಖಾನ್(36), ಖೇರವಾ ಗ್ರಾಮದ ಮುನೀರ್‌ಖಾನ್( 50), ಆಬ್ಯಾಖಾನ್ (44), ಸಡಕ್ ಪಾರ ಗ್ರಾಮದ ಶೇರು(35) ಬಂಧಿತರು.

ಡಿ.8ರಂದು ಆಂಧ್ರ ಮೂಲದ ಉದ್ಯಮಿ ವೆಂಕಟೇಶ್ವರ್ ರಾವ್ ಎಂಬುವರು ಬೆಂಗಳೂರಿನಲ್ಲಿನ ಮಾರತ್ ಹಳ್ಳಿಯಲ್ಲಿ ಬಿಲ್ಡಿಂಗ್ ಮಾರಾಟ ಮಾಡಿ ಅಗ್ರೀಮೆಂಟ್ ಮಾಡಿಕೊಂಡಿದ್ದ ಖರೀದಿದಾರರಿಂದ 55 ಲಕ್ಷ ರು. ನಗದು ಹಣ ಹಾಗೂ ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಬೆಂಗಳೂರಿನಿಂದ ಹೈದರಾಬಾದ್ ಗೆ ಕೆಎ 57- ಎಫ್ 3911 ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಹೋಗುತ್ತಿದಾಗ ಪೆರೇಸಂದ್ರ ಪೊಲೀಸ್ ಠಾಣೆ ಸರಹದ್ದಿನ ಆರೂರು ಬಳಿಯ ಎನ್.ಎಚ್-44 ರಸ್ತೆಯ ಪಕ್ಕದ ಸಾಯಿ ಡೆಲಿಕೆಸಿ ಹೋಟೆಲ್ ಬಳಿ ರಾತ್ರಿ 10 ಗಂಟೆಗೆ ಬಸ್ ನಿಲ್ಲಿಸಿದಾಗ ಶ್ರೀ ವೆಂಕಟೇಶ್ವರ್ ರಾವ್ ರಿಪ್ರೆಶ್‌ಮೆಂಟ್ ಗಾಗಿ ಹೋಟೆಲ್ ಗೆ ಹೋಗಿ ಮರಳಿ ಬಂದಾಗ ಬಸ್ಸಲ್ಲಿದ್ದ ನಗದು, ಸಂಬಂಧಿಸಿದ ದಾಖಲಾತಿಗಳು ಇರುವ ಬ್ಯಾಗ್ ಕಳವು ಆಗಿತ್ತು. ನಂತರ ಉದ್ಯಮಿ ವೆಂಕಟೇಶ್ವರ ರಾವ್ ನೀಡಿದ್ದ ದೂರು ಆಧರಿಸಿ‌ ಪೆರೇಸಂದ್ರ ಪೊಲೀಸರು ಮಧ್ಯಪ್ರದೇಶಕ್ಕೆ ತೆರಳಿ ನಾಲ್ವರು ಆರೋಪಿಗಳನ್ನು ಬಂಧಿಸಿ, ದೋಚಿದ್ದ 55 ಲಕ್ಷ ರು. ನಗದು ವಶಪಡಿಸಿಕೊಂಡಿದ್ದಾರೆ.

ಎಸ್ ಪಿ ಕುಶಲ್ ಚೌಕ್ಷೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ ರೈ, ಡಿವೈಎಸ್ ಪಿ ಎಸ್. ಶಿವಕುಮಾರ್ ಮಾರ್ಗದರ್ಶನದಲ್ಲಿ ಗುಡಿಬಂಡೆ ಸಿಪಿಐ ಡಿ.ಎಚ್.ಮುನಿಕೃಷ್ಣ ನೇತೃತ್ವದ ತಂಡದಲ್ಲಿ ಪಿಎಸ್ಐಗಳಾದ ಪುನೀತ್ ನಂಜರಾಯ್, ರಮೇಶ್ ಕೆ., ಗುಣವತಿ, ಗಣೇಶ್, ಆನಂದ. ಎನ್., ಹೆಡ್ ಕಾನ್ಸ್ಟೇಬಲ್ ಗಳಾದ ಅರುಣ್ ಮಾರುತಿ, ದಕ್ಷಿಣಾ ಮೂರ್ತಿ , ಶ್ರೀನಿವಾಸ್, ಸಂಪತ್, ಅಶ್ವತ್ಥ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ತಂಡದ ಸಿಬ್ಬಂದಿ ರವಿಕುಮಾರ್ ಮತ್ತು ಮುನಿಕೃಷ್ಣರವರ ತಂಡ ಕಳ್ಳರ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿದ್ದಾರೆ.