ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

| Published : Nov 22 2025, 02:30 AM IST

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ಸಂಕಷ್ಟ ಹಾಗೂ ಕೌಟುಂಬಿಕ ಕಲಹದಿಂದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಮೀಪದ ಚಿಕ್ಕಮಲ್ಲಿಗವಾಡದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಧಾರವಾಡ:

ಆರ್ಥಿಕ ಸಂಕಷ್ಟ ಹಾಗೂ ಕೌಟುಂಬಿಕ ಕಲಹದಿಂದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಮೀಪದ ಚಿಕ್ಕಮಲ್ಲಿಗವಾಡದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಗ್ರಾಮದ ವಿಠ್ಠಲ್‌ ಶಿಂಧೆ (80) ಅವರ ಪುತ್ರ ನಾರಾಯಣ ಶಿಂಧೆ (42), ಮಕ್ಕಳಾದ ಶಿವರಾಜ (12), ಶ್ರೀನಿಧಿ (10) ಮೃತ ದುರ್ದೈವಿಗಳು.

ನಾರಾಯಣ ಧಾರವಾಡದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿತ್ಯ ಮಕ್ಕಳನ್ನು ಶಾಲೆ ಬಿಟ್ಟು ತನ್ನ ಕೆಲಸಕ್ಕೆ ಹೋಗುತ್ತಿದ್ದ, ಶುಕ್ರವಾರ ಸಹ ಬೆಳಗ್ಗೆ ಎಂದಿನಂತೆ ತನ್ನಿಬ್ಬರು ಮಕ್ಕಳೊಂದಿಗೆ ತಂದೆಯನ್ನು ಕರೆದುಕೊಂಡು ಹೋಗಿದ್ದನು. ಆದರೆ, ಶಾಲೆಗೆ ಹೋಗುವ ಬದಲು ಬಾವಿಯಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿ ಬಳಿಯ ಜಾನುವಾರು ಮೇಯಿಸುತ್ತಿದ್ದವರು ಮಧ್ಯಾಹ್ನ ಮೃತದೇಹಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿದ ಗ್ರಾಮೀಣ ಠಾಣೆ ಪೊಲೀಸರು ಶವ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಸಮವಸ್ತ್ರದಲ್ಲಿ ಮಕ್ಕಳ ಸಾವು:

ಮಕ್ಕಳಿಬ್ಬರು ಶಾಲಾ ಸಮವಸ್ತ್ರದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ನಾರಾಯಣ ಪತ್ನಿ ಶಿಲ್ಪಾ ಅವರಿಗೆ ಶಾಕ್‌ ಆಗಿದ್ದು ಶಿಂಧೆ ಕುಟುಂಬ ಮಾತ್ರವಲ್ಲದೇ ಇಡೀ ಊರಿನ ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ನಾರಾಯಣ ವಿವಿಧೆಡೆ ₹ 15 ಲಕ್ಷದಷ್ಟು ಸಾಲ ಮಾಡಿಕೊಂಡಿರುವ ಜತೆಗೆ ಇತ್ತೀಚೆಗೆ ಪತ್ನಿ ಜೊತೆ ಜಗಳ ಸಹ ಮಾಡಿಕೊಂಡಿದ್ದನು. ಈ ವಿಚಾರವಾಗಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಗ್ರಾಮೀಣ ಠಾಣೆ ಪೊಲೀಸರು ಘಟನೆಗೆ ಬರೀ ಆರ್ಥಿಕ ಸಂಕಷ್ಟವೋ ಅಥವಾ ಮತ್ತಾವ ಕಾರಣವಿದೆಯೇ ಎಂಬುದರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.ಚಿಕ್ಕಮಲ್ಲಿಗವಾಡ ಗ್ರಾಮ ಹೊರವಲಯದಲ್ಲಿ ಬೆಳಗ್ಗೆ 9ರ ನಂತರ ನಾರಾಯಣ ಶಿಂಧೆ ಕುಟುಂಬ ಮಕ್ಕಳು ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾಮೂಹಿಕ ಆತ್ಮಹತ್ಯೆಗೆ ನಿಖರ ಕಾರಣ ತನಿಖೆ ನಂತರವೇ ತಿಳಿದು ಬರಲಿದೆ.

ಗುಂಜನ್‌ ಆರ್ಯ, ಪೊಲೀಸ್‌ ವರಿಷ್ಠಾಧಿಕಾರಿ, ಧಾರವಾಡ