ಆರು ವರ್ಷದ ಕಂದಮ್ಮ ಸೇರಿ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕಡಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

 ಮಡಿಕೇರಿ : ಆರು ವರ್ಷದ ಕಂದಮ್ಮ ಸೇರಿ ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಕಡಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೇಗೂರಿನ ಕುಳತೋಡು ಗ್ರಾಮದಲ್ಲಿ ನಡೆದಿದೆ.

ಆರೋಪಿಯನ್ನು ಕೇರಳ ಮೂಲದ ಗಿರೀಶ್ (35) ಎಂದು ಗುರುತಿಸಲಾಗಿದೆ. ಆರೋಪಿಯ ಮಾವ ಕರಿಯ (75), ಅತ್ತೆ ಗೌರಿ (70), ಪತ್ನಿ ನಾಗಿ (30) ಹಾಗೂ ಪುತ್ರಿ ಕಾವೇರಿ (5) ಕೊಲೆಯಾದವರು.

ಕೃತ್ಯದ ಬಳಿಕ ಹತ್ಯೆ ಆರೋಪಿ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದಾನೆ. ಗುರುವಾರ ರಾತ್ರಿಯೇ ಹತ್ಯೆ ನಡೆದಿರುವ ಸಾಧ್ಯತೆಯಿದೆ. ಹತ್ಯೆಗೀಡಾದ ಕರಿಯ ಕುಟುಂಬವರನ್ನು ಗ್ರಾಮದ ವ್ಯಕ್ತಿಯೊಬ್ಬರು ಕೆಲಸಕ್ಕೆ ಕರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ನಾಗಿಯೊಂದಿಗೆ ಗಿರೀಶ್ ಮೂರನೇ ಮದುವೆಯಾಗಿ ತೋಟದ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಕಾಫಿ ಬೀಜ ಮಾರಾಟ ಮಾಡಿದ ಹಣದ ವಿಚಾರಕ್ಕಾಗಿ ನಾಲ್ವರ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಏಳು ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಿರೀಶ್ ಪತ್ತೆಗೆ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಆರೋಪಿಯ ಪತ್ತೆಗೆ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.