ಸಾರಾಂಶ
ದಾವಣಗೆರೆ : ಹಿಂದುತ್ವಕ್ಕಾಗಿ, ಹಿಂದುಗಳ ಪರವಾಗಿ ಸದಾ ನಿಲ್ಲುವ, ಬಿಜೆಪಿ ನಿಷ್ಟ, ಹಿರಿಯ ಶಾಸಕ, ನಾಯಕ ಬಸವನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಯಾವ ನ್ಯಾಯ ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಪ್ರಶ್ನಿಸಿದ್ದಾರೆ.
ಯತ್ನಾಳರು ಭ್ರಷ್ಟರು, ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡುತ್ತಿದ್ದರು. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದೇ ಮಾನದಂಡವಲ್ಲ. ವಿಧಾನಸಭೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ಸಿನ ವೈಫಲ್ಯ ಎತ್ತಿತೋರಿಸುವಲ್ಲಿ, ಬೆಚ್ಚಿ ಬೀಳುವಂತೆ ಪ್ರಶ್ನಿಸುತ್ತಿದ್ದ ಯತ್ನಾಳರನ್ನು ಉಚ್ಚಾಟಿಸಿ ಬಿಜೆಪಿ ಹೈಕಮಾಂಡ್ ಏನು ಸಂದೇಶ ನೀಡಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇ ತಪ್ಪಾ? ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ, ನಿಷ್ಟಾವಂತ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕೆಂದಿದ್ದೇ ತಪ್ಪಾ? ಇದೆಲ್ಲಾ ತಪ್ಪೆನ್ನುವುದಾದರೆ ಬಿಜೆಪಿಯಲ್ಲಿ ನಿಷ್ಟಾವಂತ ಮುಖಂಡರು, ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗುತ್ತದೆ. ಬಿಜೆಪಿಯಲ್ಲಿ ನೆಲೆ ಇಲ್ಲದೇ, ಸೋತು ಮನೆಯಲ್ಲಿ ಕುಳಿತ ಸ್ವಯಂಘೋಷಿತ ನಾಯಕರೆಂದು ಘೋಷಣೆ ಮಾಡಿಕೊಂಡು, ಪಕ್ಷದ ವಿರುದ್ಧವೇ ಪಿತೂರಿ ಮಾಡಿದವರ ಮಾತುಗಳನ್ನು ಕೇಳಿ, ಬಸವನಗೌಡ ಪಾಟೀಲ ಯತ್ನಾಳರಂತಹ ನಾಯಕರನ್ನು ಪಕ್ಷದಿಂದ ಉಚ್ಛಾಟಿಸುವುದು ಪಕ್ಷಕ್ಕೆ ಶೋಭೆ ತರುವುದಿಲ್ಲ. ಕೂಡಲೇ ಬಸವನಗೌಡ ಪಾಟೀಲ್ ಯತ್ನಾಳ್‌ರ ಉಚ್ಚಾಟನೆ ಕ್ರಮ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಕಾರ್ಯಕರ್ತರು ಬೀದಿಗಿಳಿದು ಹೋರಾಡುವುದರಲ್ಲಿ ಅನುಮಾನ ಇಲ್ಲ ಎಂದು ಆನಂದರಾಜ ಎಚ್ಚರಿಸಿದ್ದಾರೆ.