ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 4 ಕೆ.ಜಿ ಬೆಳ್ಳಿ ಹಾಗೂ 1 ಗ್ರಾಂ ಬಂಗಾರ, ಬೈಕ್‌ , ಕಾರು ಸೇರಿದಂತೆ ಒಟ್ಟು ₹11 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 4 ಕೆ.ಜಿ ಬೆಳ್ಳಿ ಹಾಗೂ 1 ಗ್ರಾಂ ಬಂಗಾರ, ಬೈಕ್‌ , ಕಾರು ಸೇರಿದಂತೆ ಒಟ್ಟು ₹11 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಉಪ್ಪಳಿ ಕಲ್ಪದೊಡ್ಡಿಯ ಮಂಜುನಾಥ(38) ಹಾಗೂ ಭದ್ರಾವತಿ ತಾಲೂಕಿನ ಹೊನ್ನಟ್ಟಿ-ಹೊಸರು ತಿಪ್ಪೇಸ್ವಾಮಿ (44) ಬಂಧಿತ ಆರೋಪಿಗಳು.

ಶೃಂಗೇರಿ ಮೆಣಸೆ ಗ್ರಾಮದ ಕನ್ಯಾಕುಮಾರಿ ದೇವಸ್ಥಾನ ಹಾಗೂ ಯಡಿದಳ್ಳಯ ಕೊಟ್ಟಾರು ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪತ್ತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಚಿಸಿದ್ದ ತಂಡ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಾಸನ ಜಿಲ್ಲೆಯ ಒಂದು ದೇವಾಲಯ ಸೇರಿದಂತೆ ಒಟ್ಟು ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಶೃಂಗೇರಿಯ 2 ದೇವಸ್ಥಾನ ಸೇರಿದಂತೆ ಮೂಡಿಗೆರೆ ಹಾಗೂ ಹಾಸನ ಬೇಲೂರಿನ ಒಂದೊಂದು ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 4 ಕೆ.ಜಿ ಬೆಳ್ಳಿ ಹಾಗೂ 1 ಗ್ರಾಂ ಬಂಗಾರ, ಬೈಕ್‌ , ಕಾರು ಸೇರಿದಂತೆ ಒಟ್ಟು 11 ಲಕ್ಷ ರು, ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ಯಾಕುಮಾರಿ ದೇವಸ್ಥಾನದಲ್ಲಿ ಫೆಬ್ರವರಿ 25 ರ ರಾತ್ರಿ ಕಳ್ಳತನವಾಗಿತ್ತು. ಈ ವೇಳೆ ಕಳ್ಳರು 3 ಹುಂಡಿ, 200 ಗ್ರಾಂ ಬೆಳ್ಳಿಯ ದೇವರ ಮುಖವಾಡ ಹಾಗೂ 2 ಗ್ರಾಂ ತೂಕದ ಚಿನ್ನದ ತಾಳಿ ಸರ ಕಳ್ಳತನವಾಗಿತ್ತು. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅದೇ ರೀತಿ ಯಡದಳ್ಳಿ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್‌ 17 ರ ರಾತ್ರಿ ಗರ್ಭಗುಡಿಯ ಬಾಗಿಲು ಒಡೆದು ₹1.50 ಲಕ್ಷ ಮೌಲ್ಯದ ಬೆಳ್ಳಿಯ ಪ್ರಭಾವಳಿ ₹30 ಸಾವಿರ ಮೌಲ್ಯದ ಬೆಳ್ಳಿಯ ಚೊಂಬು ₹15 ಸಾವಿರ ಮೌಲ್ಯದ ಬೆಳ್ಳಿಯ ಭಟ್ಟಲು ₹25 ಸಾವಿರ ಮೌಲ್ಯದ ಎರಡು ಬೆಳ್ಳಿಯ ಕೌಳಿಗೆ ಮತ್ತು ಸೌಟು, ಕಾಣಿಕೆ ಪೆಟ್ಟಿಗೆ ಕಳ್ಳತನವಾಗಿತ್ತು.

ಅಪರಾಧ ದಳ ತನಿಖಾ ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಗೆ ಪೋಲಿಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿರುತ್ತಾರೆ.