ನಾಲ್ವರು ಆದಿವಾಸಿ ಮಹಿಳೆಯರಿಗೆ ದೆಹಲಿ ವಿಮಾನ ಏರುವ ಭಾಗ್ಯ!

| Published : Feb 26 2024, 01:33 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನ ಮೀನಾಕ್ಷಿ , ವನಿತಾ, ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ, ಬಂಟ್ವಾಳ ತಾಲೂಕಿನ ಸುಂದರಿ ದೆಹಲಿ ಪ್ರವಾಸ ಭಾಗ್ಯ ಪಡೆದವರು.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಆದಿವಾಸಿ ಮಹಿಳೆಯರಿಗೆ ಇದೀಗ ದೆಹಲಿಯ ವಿಮಾನವೇರುವ ಭಾಗ್ಯ ಒದಗಿಬಂದಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆ ಇದಾಗಿದ್ದು, ‘ಸಂಜೀವಿನೀ’- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.೧ ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್‌ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶ ದೊರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ವರು ಕೊರಗ ಸಮುದಾಯದ ಮಹಿಳೆಯರು ಸೇರಿದಂತೆ ಕರ್ನಾಟಕ ರಾಜ್ಯದ ಉಡುಪಿ, ಉತ್ತರ ಕನ್ನಡ, ಚಾಮರಾಜನಗರದಿಂದ ಒಟ್ಟು ೩೫ ಮಂದಿ ದೆಹಲಿಗೆ ತೆರಳಲಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನ ಮೀನಾಕ್ಷಿ , ವನಿತಾ, ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ, ಬಂಟ್ವಾಳ ತಾಲೂಕಿನ ಸುಂದರಿ ದೆಹಲಿ ಪ್ರವಾಸ ಭಾಗ್ಯ ಪಡೆದವರು.

ಮೀನಾಕ್ಷಿ ಕೊಲ್ಲಮೊಗರು:

ಸುಳ್ಯ ತಾಲೂಕಿನ ಕೊಲ್ಲಮೊಗರುವಿನ ಮೀನಾಕ್ಷಿ ಆದಿಲಕ್ಷ್ಮೀ ಸಂಜೀವಿನೀ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ಕೀರ್ತಿ ಸಂಜೀವಿನೀ ಒಕ್ಕೂಟದ ಸದಸ್ಯರಾಗಿದ್ದಾರೆ. ಕೃಷಿ ಉದ್ಯೋಗ ಸಖಿಯೂ ಆಗಿರುವ ಮೀನಾಕ್ಷಿ ಅವರು ಸ್ಥಳೀಯವಾಗಿ ಸಂಘಟನಾ ಚತುರರಾಗಿ ಗುರುತಿಸಿಕೊಂಡವರು. ಬಳ್ಳಿಯಿಂದ ಬುಟ್ಟಿ ಸಹಿತ ಇನ್ನಿತ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರು ಪಳಗಿದವರು. ದೆಹಲಿಗೆ ಹೋಗುತ್ತೇನೆ, ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇನೆ ಎನ್ನುವುದೇ ನನಗೆ ತುಂಬಾ ಖುಷಿ ತಂದಿದೆ ಎನ್ನುತ್ತಾರೆ ಅವರು,

ವನಿತಾ ಕೊಲ್ಲಮೊಗರು:

ಸುಳ್ಯ ತಾಲೂಕಿನ ಕೊಲ್ಲಮೊಗರು ಗ್ರಾಮದ ವನಿತಾ ಆದಿಲಕ್ಷ್ಮೀ ಸ್ವಸಹಾಯಯ ಗುಂಪಿನ ಸದಸ್ಯೆಯಾಗಿರುವ ಇವರು ಬಡತನದ ಹಿನ್ನೆಲೆಯಲ್ಲಿ ಬೆಳೆದವರು. ಬಳ್ಳಿಯಿಂದ ಬುಟ್ಟಿ ಸಹಿತ ಅನೇಕ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರದು ಎತ್ತಿದ ಕೈ. ದೆಹಲಿಗೆ ವಿಮಾನದಲ್ಲಿ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ರಾಷ್ಟ್ರಪತಿಗಳನ್ನು ಭೇಟಿಯಾಗುವುದು ಮತ್ತಷ್ಟು ಖುಷಿಯ ವಿಚಾರ ಎನ್ನುತ್ತಾರವರು.

ಲಕ್ಷ್ಮೀ ಮೇಲಂತಬೆಟ್ಟು:

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಲಕ್ಷ್ಮೀ ಅವರು ನಿಸರ್ಗ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ತ್ರಿವೇಣಿ ಸಂಂವಿನೀ ಒಕ್ಕೂಟದ ಸದಸ್ಯೆ. ತನ್ನ ತಾಯಿ ತಯಾರಿಸುವ ಬುಟ್ಟಿ ಸಹಿತ ಕರಕುಶಲ ಸಾಮಗ್ರಿಗಳನ್ನು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ. ನಾನು ಮಂಗಳೂರು ಬಿಟ್ಟರೆ ಬೇರೆಲ್ಲೂ ಹೋಗಿಲ್ಲ. ಇದೀಗ ದೆಹಲಿಗೆ ಹೋಗುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.

ಸುಂದರಿ ಕನ್ಯಾನ:

ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಸುಂದರಿ ಅವರು ಶಿವಗಿರಿ ಗುಂಪಿನ ಸದಸ್ಯೆಯಾಗಿದ್ದು, ಸ್ಫೂರ್ತಿ ಸಂಜೀವಿನೀ ಒಕ್ಕೂಟದ ಸದಸ್ಯೆ. ನವಸಾಕ್ಷರೆಯಾಗಿರುವ ಇವರು, ಕೊರಗರ ಡೋಲು ತಂಡದ ಪ್ರಮುಖ ಕಲಾವಿದೆಯಾಗಿ ಗುರುತಿಸಿಕೊಂಡವರು. ಡೋಲು ತಂಡದ ಜೊತೆ ಧಾರವಾಡ, ಬಳ್ಳಾರಿ, ಬೆಂಗಳೂರು, ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಇವರು ಇದೇ ಮೊದಲ ಬಾರಿಗೆ ದೆಹಲಿಗೆ ವಿಮಾನದಲ್ಲಿ ತೆರಳುತ್ತಿದ್ದಾರೆ. ಬುಟ್ಟಿ ಸಹಿತ ಇತರ ಕರಕುಶಲ ವಸ್ತುಗಳ ತಯಾರಿಯಲ್ಲೂ ಇವರದು ಎತ್ತಿದ ಕೈ.ನಾಳೆ ಬೆಂಗಳೂರಿಗೆ ಪ್ರಯಾಣ: ಇವರು ಮಂಗಳವಾರ ರಾತ್ರಿ ಬಸ್‌ ನಲ್ಲಿ ಬೆಂಗಳೂರಿಗೆ ಪಯಣಿಸಲಿದ್ದಾರೆ. ಫೆ.೨೮ ರಂದು ಮಧ್ಯಾಹ್ನ ರಾಜ್ಯಮಟ್ಟದ ಅಧಿಕಾರಿಗಳು ಇವರ ಜೊತೆ ಸಂವಾದ ನಡೆಸುವರು. ಫೆ.೨೯ ರಂದು ಮುಂಜಾನೆ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಅಲ್ಲಿ ಇವರು ದೆಹಲಿಯ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಲಿದ್ದು, ಮಾರ್ಚ್‌ ೧ರಂದು ಬೆಳಗ್ಗೆ ರಾಷ್ಟ್ರಪತಿ ಗಳ ಭೇಟಿ ಹಾಗೂ ಅಮೃತ ಉದ್ಯಾನ ಭೇಟಿಗೆ ಅವಕಾಶ ಒದಗಿಬರಲಿದೆ. ಬಳಿಕ ಆದಿನ ರಾತ್ರಿಯೇ ವಿಮಾನದಲ್ಲಿ ಮರಳಿ ಬೆಂಗಳೂರಿಗೆ ಪಯಣಿಸಲಿರುವ ಇವರು ಮಾ.೨ ರಂದು ಹಗಲು ಮಂಗಳೂರಿನತ್ತ ವಾಪಸ್‌ ಬರಲಿದ್ದಾರೆ.

ರಾಷ್ಟ್ರಪತಿಗಳಿಗೆ ಗಿಫ್ಟ್‌:

ದೆಹಲಿಗೆ ತೆರಳಿ ರಾಷ್ಟ್ರಪತಿಯವರನ್ನು ಭೇಟಿಯಾದ ನೆನಪಿಗೆ ಅವರಿಗೆ ಬಳ್ಳಿಯಿಂದ ತಯಾರಿಸಿದ ಪದಕ ಮಾದರಿಯ ಕರಕುಶಲ ವಸ್ತುವನ್ನು ಕೊಡುಗೆಯಾಗಿ ನೀಡಬೇಕು ಎಂದುಕೊಂಡಿದ್ದೇವೆ, ಅದಕ್ಕಾಗಿ ಅದರ ತಯಾರಿ ಕೆಲಸವನ್ನು ಮನೆಮಂದಿ ಸೇರಿ ಮಾಡುತ್ತಿದ್ದೇವೆ ಎಂದು ಸುಳ್ಯ ತಾಲೂಕಿನ ಕೊಲ್ಲಮೊಗರುವಿನ ಮೀನಾಕ್ಷಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದವರಿಗೆ ಈ ಬಾರಿ ದೆಹಲಿ ಭೇಟಿಗೆ ವಿಶೇಷ ಅವಕಾಶ ಒದಗಿ ಬಂದಿದೆ, ನಮ್ಮ ಜಿಲ್ಲೆಯ ಕೊರಗ ಸಮುದಾಯದ ಮಹಿಳೆಯರೂ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎನ್ನುತ್ತಾರೆ ದ.ತ. ಜಿ.ಪಂ. ಯೋಜನಾ ನಿರ್ದೇಶಕ ಕೆ.ಇ. ಜಯರಾಮ್‌.