ಸಾರಾಂಶ
ಪರೀಕ್ಷಿತ್‌ನ ಕೈಚಳಕ, ಜಾಣ್ಮೆ, ಜ್ಞಾನ ಹಾಗೂ ನೆನಪಿನಶಕ್ತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ತಾನು ಚಿತ್ರಿಸಿದ ನೂರತೊಂಬತ್ತೈದು ರಾಷ್ಟ್ರಗಳನ್ನೂ ಹೆಸರು ಸಹಿತ ಗುರುತಿಸುತ್ತಾನೆ ಈ ಪೋರ.
ಕನ್ನಡಪ್ರಭ ವಾರ್ತೆ ಪುತ್ತೂರು
ಈ ವಿದ್ಯಾರ್ಥಿಯದ್ದು ಅಪರಿಮಿತ ಜಾಣ್ಮೆ. ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿರುವ ಈತ ಭಾರತ ಸಹಿತ ಬೇರೆ ರಾಷ್ಟ್ರಗಳನ್ನೂ ಚಿತ್ರಿಸುತ್ತಾನೆ. ನಾವು ನೋಡ ನೋಡುತ್ತಿದ್ದಂತೆಯೇ ಅಂತಿಮವಾಗಿ ಪ್ರಪಂಚವನ್ನೇ ನಮ್ಮ ಕಣ್ಣ ಮುಂದೆ ಅರಳಿಸಿ ಬಿಡುತ್ತಾನೆ. ಪ್ರಪಂಚದ ನೂರ ತೊಂಬತ್ತೈದು ದೇಶಗಳನ್ನೂ ಆಯಾ ಜಾಗದಲ್ಲೇ ಚಿತ್ರಿಸಿ ತೋರಿಸುತ್ತಾನೆ ಈ ಬಾಲಕ.ಭಾರತದ ಭೂಪಟದೊಂದಿಗೆ ಆಯಾ ರಾಜ್ಯಗಳನ್ನೂ ಗುರುತಿಸಿ ಚಿತ್ರಿಸುತ್ತಾನೆ. ಒಮ್ಮೆ ಚಿತ್ರಿಸಲು ಆರಂಭಿಸಿದರೆ ತಿದ್ದದೇ ಕೊನೆಯವರೆಗೂ ಮುಂದುವರಿಯುವ ಈ ವಿದ್ಯಾರ್ಥಿಯ ಹೆಸರು ಪರೀಕ್ಷಿತ್. ಪ್ರಸ್ತುತ ಪುತ್ತೂರಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ನಾಲ್ಕೇ ತರಗತಿ ವಿದ್ಯಾರ್ಥಿ.
ಪರೀಕ್ಷಿತ್‌ನ ಕೈಚಳಕ, ಜಾಣ್ಮೆ, ಜ್ಞಾನ ಹಾಗೂ ನೆನಪಿನಶಕ್ತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ತಾನು ಚಿತ್ರಿಸಿದ ನೂರತೊಂಬತ್ತೈದು ರಾಷ್ಟ್ರಗಳನ್ನೂ ಹೆಸರು ಸಹಿತ ಗುರುತಿಸುತ್ತಾನೆ ಈ ಪೋರ. ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ವೃದ್ಧಿಗಾಗಿ ಒಂದೊಂದಕ್ಕೆ ಸರಿಸುಮಾರು 1.75 ಲಕ್ಷ ಬೆಲೆಬಾಳುವ ಹಲವು ಸ್ಮಾರ್ಟ್‌ಫೋನ್‌ಗಳನ್ನು ಅಳವಡಿಸಲಾಗಿದೆ. ಈ ಬೋರ್ಡ್ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರಬಿಂದುವೆನಿಸಿದೆ. ಅನೇಕ ಹೊಸ ಹೊಸ ಪ್ರಯೋಗಗಳಿಗೆ ಈ ಬೋರ್ಡ್ ತನ್ನನ್ನು ತಾನು ಒಡ್ಡಿಕೊಳ್ಳುತ್ತಿದೆ. ಇದೀಗ ಪರೀಕ್ಷಿತ್‌ಗೆ ಈ ಬೋರ್ಡ್ ಮೂಲಕ ಪ್ರಪಂಚವನ್ನೇಕೆ ಚಿತ್ರಿಸಬಾರದು ಎಂಬ ಪ್ರಶ್ನೆ ಬಂದಿದೆ. ಹಾಗಾಗಿ ಪ್ರಯತ್ನಪಡುತ್ತಾ ಸಾಗಿ ಇದೀಗ ಆ ಬೋರ್ಟ್‌ನಲ್ಲಿ ಜಗತ್ತನ್ನೇ ಕೆತ್ತುತ್ತಿದ್ದಾನೆ!ಹುಟ್ಟುಹಬ್ಬಕ್ಕೆ ಅಪ್ಪ ನೀಡಿದ ಅಟ್ಲಾಸ್ ನೋಡಿಕೊಂಡು ಪ್ರಪಂಚದ ಚಿತ್ರ ಬಿಡಿಸಲಾರಂಭಿಸಿದೆ. ಶಾಲೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು ನೀಡುವ ಪ್ರೋತ್ಸಾಹ ನನ್ನನ್ನು ಪ್ರೇರೇಪಿಸುತ್ತಿರುತ್ತದೆ. ಹೆತ್ತವರ ಮಾರ್ಗದರ್ಶನವೂ ಸಾಕಷ್ಟಿದೆ. ಶಾಲೆಯ ಸ್ಮಾರ್ಟ್ ಬೋರ್ಡ್ ನನ್ನ ಕಾರ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಪ್ರತಿಬಾರಿಯೂ ವಿಶ್ವ ಭೂಪಟ ಬಿಡಿಸುವಾಗ ಭಾರತದಿಂದಲೇ ಶುರುಮಾಡುತ್ತೇನೆ ಎನ್ನುತ್ತಾನೆ ಪರೀಕ್ಷಿತ್. ಪುತ್ತೂರಿನ ಸುಧಾಕರ ಪಿ. ಹಾಗೂ ವಾಣಿ ಕೆ. ದಂಪತಿ ಪುತ್ರ. ತಂದೆ ಸಮಾಜಶಾಸ್ತ್ರ ಶಿಕ್ಷಕರಾಗಿರುವುದು ಪರೀಕ್ಷಿತನ ಪ್ರತಿಭೆಗೆ ಹೆಚ್ಚಿನ ಇಂಬು ನೀಡಿದೆ. ಮಕ್ಕಳಲ್ಲಿ ಅಪಾರ ಪ್ರಮಾಣದ ಪ್ರತಿಭೆ, ಸಾಮರ್ಥ್ಯ ಅಡಗಿದೆ. ಅದನ್ನು ಹೊರತರುವ ಕಾರ್ಯ ಹೆತ್ತವರಿಂದ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಆಗಬೇಕಿದೆ. ನಮ್ಮ ಸಂಸ್ಥೆಯಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಿರುವುದು ಮಕ್ಕಳ ಸೃಜನಶೀಲತೆ ವೃದ್ಧಿಗೆ ಸಹಕಾರಿಯಾಗಿದೆ. ಕಲಿಕಾ ಸಾಮರ್ಥ್ಯದಲ್ಲಿ ಹೆಚ್ಚಳ ಕಾಣುತ್ತಿದೆ. ನಾವು ಒದಗಿಸಿಕೊಟ್ಟ ವ್ಯವಸ್ಥೆಯನ್ನು ಮಕ್ಕಳು ಬಳಸಿಕೊಂಡು ಸಾಧನೆ ಮೆರೆಯುವಾಗ ಸಾರ್ಥಕಭಾವ ಮೂಡುತ್ತದೆ- ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು
;Resize=(128,128))
;Resize=(128,128))