ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ಇನ್‌ಸ್ಟಿಟ್ಯೂಟ್‌ ನಲ್ಲಿ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯ, ಸೃಜನಶೀಲತೆ ಹಾಗೂ ಮಾಧ್ಯಮ ಸಂಬಂಧಿತ ಜ್ಞಾನವನ್ನು ಅಭಿವೃದ್ಧಿ ಪಡಿಸುವ ಹಾಗೂ ಹೊಸ ಕೌಶಲ್ಯ ಬೆಳೆಸುವ ಉದ್ದೇಶದಿಂದ ಪ್ರೇಮ್ ಎಕ್ಸ್ ಹೆಸರಿನ ಮೀಡಿಯಾ ಕ್ಲಬ್‌ ಆರಂಭಿಸಲಾಗಿದೆ. ಈ ಕ್ಲಬ್ಬನ್ನು ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ ಅವರು ಬ್ಯಾನರ್ ಅನಾವರಣಗೊಳಿಸಿ ಉದ್ಘಾಟಿಸಿದರು, ನಂತರ ಮಾತನಾಡಿದ ಅವರು ಇಂದು ಮಾಧ್ಯಮ ಕ್ಷೇತ್ರ ಎದುರಿಸುತ್ತಿರುವ ಸಂಕಷ್ಟ ಹಾಗೂ ವೃತ್ತಿ ಜೀವನದಲ್ಲಿ ಎದುರಿಸುವ ಸವಾಲುಗಳನ್ನು ಹಂಚಿಕೊಂಡರು. ಈ ಕಾಲೇಜು ಆರಂಭವಾದ ದಿನದಿಂದ ತಮಗೆ ಇರುವ ಒಡನಾಟವನ್ನು ನೆನಪಿಸಿಕೊಂಡು, ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಈ ಮೀಡಿಯಾ ಕ್ಲಬ್ ಉತ್ತಮ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಹೆಗಡೆ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ ಸಂಘದ ಉದ್ದೇಶ, ಅದನ್ನು ವಿದ್ಯಾರ್ಥಿಗಳು ಹೇಗೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿವರಿಸಿದರು. ಐಎಂಜೆ ಇನ್‌ಸ್ಟಿಟ್ಯೂಟ್‌ ಶೈಕ್ಷಣಿಕ ನಿರ್ದೇಶಕ ಡಾ. ಎಸ್. ಎನ್. ಭಟ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂತಹ ಸಂಘದ ಮಹತ್ವ ಹಾಗೂ ಅದರಿಂದಾಗುವ ಬೆಳವಣಿಗೆಗಳನ್ನು ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು. ನಂತರ ಈ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮೂರನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ನಂದನ್ ಶೆಟ್ಟಿ ಈ ಕ್ಲಬ್ ನ ಅಧ್ಯಕ್ಷರಾಗಿದ್ದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕರುಣಾ ಆರ್ ಗೌಡ ಮತ್ತು ಇಶ್ರತ್ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಯೋಜಕಿ ಪ್ರೊ. ಸೂಕ್ಷ್ಮ ಎಸ್. ಅಡಿಗ ಸ್ವಾಗತಿಸಿ, ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಲಾವಣ್ಯ ವಂದಿಸಿದರು.