ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡದೆ ವಂಚನೆ: ಖಂಡನೆ

| Published : Nov 15 2024, 12:38 AM IST

ಸಾರಾಂಶ

ತಾಪಂ ಇಒ, ನರೇಗಾ ಯೋಜನಾಧಿಕಾರಿ ಹಾಗೂ ದೊಡ್ಡ ಅರಸಿನಕೆರೆ ಗ್ರಾಪಂ ಪಿಡಿಒ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡದೆ ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ಕ್ರಮದ ವಿರುದ್ಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ದೊಡ್ಡ ಅರಸಿನಕೆರೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕೂಲಿಕಾರರು ಜನವಾದಿ ಮಹಿಳಾ ಸಂಘಟನೆ ಬೆಂಬಲದೊಂದಿಗೆ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ದೇವಿ, ಜಿಲ್ಲಾಧ್ಯಕ್ಷ ಡಿ.ಕೆ.ಲತಾ ನೇತೃತ್ವದಲ್ಲಿ ಪ್ರವಾಸಿ ಮಂದಿರ ಸಮೀಪದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ತಾಪಂ ಇಒ, ನರೇಗಾ ಯೋಜನಾಧಿಕಾರಿ ಹಾಗೂ ದೊಡ್ಡ ಅರಸಿನಕೆರೆ ಗ್ರಾಪಂ ಪಿಡಿಒ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡದೆ ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ಕ್ರಮದ ವಿರುದ್ಧ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆ ಅಡಿ ಕನಿಷ್ಠ 100 ದಿನ ಕೆಲಸ ನೀಡಬೇಕು ಎಂದು ಕಾಯ್ದೆ ಜಾರಿಯಲ್ಲಿದೆ. ಆದರೆ, ಅಧಿಕಾರಿಗಳು ಕನಿಷ್ಠ 20ರಿಂದ 30 ದಿನ ಮಾತ್ರ ಕೆಲಸ ನೀಡಿ ಕಾಯ್ದೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಉದ್ಯೋಗ ಖಾತ್ರಿ ಯೋಜನೆಯ ಎಸ್ಟಿಮೇಟ್ ಆಗಿಲ್ಲ. ಕ್ರಿಯಾಯೋಜನೆ ಪಟ್ಟಿ ಬಂದಿಲ್ಲ ಎಂದು ಸಬೂಬು ಹೇಳುವ ಮೂಲಕ

ಅಧಿಕಾರಿಗಳು ದಿನಗಳನ್ನು ಮುಂದೂಡುತ್ತಿದ್ದಾರೆ ಎಂದು ತಾಪಂ ಸಿಒ ರಾಮಲಿಂಗಯ್ಯ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಶೋಭಾ, ಜಿಲ್ಲಾ ಕಾರ್ಯದರ್ಶಿ ಸುಶೀಲ, ಮುಖಂಡರಾದ ಜಯಮ್ಮ, ಮೀನಾಕ್ಷಮ್ಮ, ಡಿ.ಕೆ.ವಿಶಾಲ, ರೇಣುಕಮ್ಮ. ಜಯಶೀಲ ಮತ್ತಿತರರು ಭಾಗವಹಿಸಿದ್ದರು.