ಉದ್ಯೋಗದ ಆಸೆಗೆ ಗೆಳತಿಯಿಂದಲೇ ವಂಚನೆಗೊಳಗಾದ ಯುವತಿ

| Published : Oct 13 2024, 01:10 AM IST

ಸಾರಾಂಶ

ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಒದಗಿಸುವುದಾಗಿ ನಂಬಿಸಿದ್ದರು. ಅದಕ್ಕೆ ಸ್ವಲ್ಪ ಖರ್ಚಾಗುತ್ತದೆಂದು ನೆಪಗಳನ್ನು ಹೇಳುತ್ತಾ ಒಟ್ಟು ೧೩ ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದು ವಂಚಿಸಿರುವುದಾಗಿ ದೂರಿದ್ದಾರೆ.

ಉಪ್ಪಿನಂಗಡಿ: ಕಾಸರಗೋಡು ಜಿಲ್ಲೆಯಲ್ಲಿ ಉದ್ಯೋಗ ಭರವಸೆ ನೀಡಿ ಕೋಟ್ಯಂತರ ರುಪಾಯಿ ವಂಚಿಸಿದ ಪ್ರಕರಣದ ಜಾಲ ಉಪ್ಪಿನಂಗಡಿಗೂ ವ್ಯಾಪ್ತಿಸಿದ್ದು, ಉದ್ಯೋಗ ಬಯಸಿದ ತನ್ನ ಗೆಳತಿಯಿಂದಲೇ ೧೩,೧೧,೬೦೦ ರು. ಹಣ ಪಡೆದು ವಂಚಿಸಿದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಚಿತಾ ರೈ ಎಂಬಾಕೆಯ ವಿರುದ್ಧ ರಕ್ಷಿತಾ ಎಂಬವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಕೇರಳ ರಾಜ್ಯದ ನೀರಾವರಿ ಇಲಾಖೆ ಅಥವಾ ಎಸ್‌ಬಿಐ ಬ್ಯಾಂಕಿನಲ್ಲಿ ಉದ್ಯೋಗ ಅವಕಾಶವಿದೆ ಎಂದು ನಂಬಿ, ವಿವಿಧ ನೆಪಗಳನ್ನು ಮುಂದಿರಿಸಿ ವಿವಿಧ ಕಂತುಗಳಲ್ಲಿ ಒಟ್ಟು ೧೩,೧೧,೬೦೦ ರು. ಹಣವನ್ನು ಪಡೆಯಲಾಗಿದೆ. ಇದರಲ್ಲಿ ೮,೬೬,೮೬೮ ರುಪಾಯಿಯನ್ನು ಬ್ಯಾಂಕ್ ಖಾತೆಯ ಮೂಲಕ ಹಾಗೂ ಉಳಿಕೆ ಮೊತ್ತವನ್ನು ಗೂಗಲ್ ಪೇ ಮೂಲಕ ಪಾವತಿಸಿರುತ್ತೇನೆಂದು ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಸಚಿತಾ ರೈ ಪ್ರಸಕ್ತ ವಿವಾಹಿತರಾಗಿ ಕಾಸರಗೋಡಿನ ಪೆರ್ಲದಲ್ಲಿ ಶಿಕ್ಷಕಿಯಾಗಿದ್ದಾರೆ. ಅಲ್ಲಿನ ಪಕ್ಷದ ಪ್ರಭಾವಿ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದು, ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ಒದಗಿಸುವುದಾಗಿ ನಂಬಿಸಿದ್ದರು. ಅದಕ್ಕೆ ಸ್ವಲ್ಪ ಖರ್ಚಾಗುತ್ತದೆಂದು ನೆಪಗಳನ್ನು ಹೇಳುತ್ತಾ ಒಟ್ಟು ೧೩ ಲಕ್ಷಕ್ಕೂ ಹೆಚ್ಚು ಹಣವನ್ನು ಪಡೆದು ವಂಚಿಸಿರುವುದಾಗಿ ದೂರಿದ್ದಾರೆ.

ರಕ್ಷಿತಾ ಅವರ ತಂದೆ ನಿಗಮವೊಂದರ ಉದ್ಯೋಗಿಯಾಗಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯಿಂದ ದೊರೆತ ಹಣವನ್ನು ಮಗಳ ಭವಿಷ್ಯ ಉಜ್ವಲವಾಗಲಿ ಎಂದು ವಂಚನೆಯ ಸುಳಿವೂ ಸಿಗದೆ ಕೊಟ್ಟಿದ್ದಾರೆ. ಇದೀಗ ವಂಚನಾ ಜಾಲ ಬಹಿರಂಗಗೊಂಡ ಬಳಿಕ ಆಘಾತಕ್ಕೆ ಒಳಗಾಗಿದ್ದು, ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದಾರೆ.