ಪೀಠೋಪಕರಣಗಳ ಪೂರೈಕೆದಾರರಿಂದ ಗ್ರಾಹಕರಿಗೆ ವಂಚನೆ

| Published : Nov 21 2024, 01:05 AM IST

ಸಾರಾಂಶ

ತಮಿಳುನಾಡಿನ ಮೂಲದವರು ಎನ್ನಲಾದ 5-6 ಮಂದಿ ಸ್ಥಳೀಯ ವಿಳಾಸದಡಿ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಎಂದು ನಾಮಫಲಕ ಹಾಕಿಕೊಂಡು ಫರ್ನಿಚರ್ಸ್‌ಗಳ ಮಾರಾಟ ಮಾಡುತ್ತಿದ್ದು, ಇದೀಗ ಮುಂಗಡ ಹಣ ಪಡೆದು ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹಟ್ಟಿ ಚಿನ್ನದಗಣಿ ಪಟ್ಟಣದ ಪಾಮನಕಲ್ಲೂರ್ ಕ್ರಾಸ್ ಬಳಿ ಪ್ರಹ್ಲಾದ್ ಶೆಟ್ಟಿ ಎನ್ನುವರ ಮಳಿಗೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಆರಂಭಿಸಿದ ತಮಿಳುನಾಡಿನ ಮೂಲದವರು ಎನ್ನಲಾದ 5-6 ಮಂದಿ ಸ್ಥಳೀಯ ವಿಳಾಸದಡಿ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಎಂದು ನಾಮಫಲಕ ಹಾಕಿಕೊಂಡು ಫರ್ನಿಚರ್ಸ್‌ಗಳ ಮಾರಾಟ ಮಾಡುತ್ತಿದ್ದು, ಇದೀಗ ಮುಂಗಡ ಹಣ ಪಡೆದು ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾದ ಘಟನೆ ನಡೆದಿದೆ.ಪಟ್ಟಣದ ಮಳಿಗೆಯೊಂದನ್ನು 3 ವರ್ಷದವರೆಗೆ ಬಾಡಿಗೆಗೆ ಅಗ್ರಿಮೆಂಟ್ ಮಾಡಿಕೊಂಡ ತಮಿಳುನಾಡಿನ ಮೂಲದ 5-6 ಜನರು ಮತ್ತು ಸ್ಥಳೀಯ ಪಟ್ಟಣದ 15-20 ಜನರನ್ನು ಕೆಲಸಕ್ಕೆ ತೆಗೆದುಕೊಂಡ ಇವರು ನಕಲಿ ಟಿನ್ ನಂಬರ್‌, ಜಿಎಸ್ಟಿ ಐಡಿ ಕ್ರಿಯೆಟ್ ಮಾಡಿ ಸ್ಥಳೀಯ ಪ.ಪಂ.ಯಿಂದ ಪರವಾನಿಗೆಯನ್ನೂ ಪಡೆದು ಕಳೆದ ಒಂದು ತಿಂಗಳಿಂದ ಮದುವೆ ಸಮಾರಂಭಗಳಿಗೆ, ಮನೆ ಸಾಮಾಗ್ರಿಗಳಾದ ಅಲ್ಮಾರಿ, ಸೋಫಾಸೆಟ್, ಟಿವಿ, ಫ್ರೀಜ್ ಸೇರಿದಂತೆ ಇತರ ಪೀಠೋಪಕರಣಗಳನ್ನು ಶೇ. 50 ರಷ್ಟು ಕಡಿಮೆ ದರದಲ್ಲಿ ಮಾರಾಟ ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಗ್ರಾಹಕರು ಮುಗಿಬಿದ್ದು 500 ರು.ದಿಂದ 1 ಲಕ್ಷದವರೆಗೆ ಫರ್ನಿಚರ್ಸ್‌ಗಳನ್ನು ಖರೀದಿಸಿದ್ದಾರೆಂದು ಹೇಳಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ತಂಡವು ನಿಮಗೆ ಬೇಕಾದ ಪೀಠೋ ಪಕರಣಗಳನ್ನು ತರಿಸಿಕೊಡಲಾಗುವುದು ಎಂದು ಗ್ರಾಹಕರಿಗೆ ಸ್ಥಳೀಯ ವಿಳಾಸದ ರಸೀದಿ ನೀಡಿ, ಕಡಿಮೆ ದರದ ಫರ್ನಿಚರ್ಸ್ ಎಂದು ನಂಬಿಸಿ ಮುಂದೆ ಗ್ರಾಹಕರು ಆರ್ಡರ್‌ ನೀಡಿದ ಪೀಠೋಪಕರಣಗಳಿಗೆ ತಕ್ಕಂತೆ ಅಂದರೆ, 500 ರು.ನಿಂದ ಹಿಡಿದು 1 ಲಕ್ಷದವರೆಗೂ ಸುಮಾರು 500 ಕ್ಕೂ ಹೆಚ್ಚು ಗ್ರಾಹಕರಿಂದ ಸುಮಾರು 1 ಕೋಟಿ ರೂಪಾಯಿಗಿಂತ ಅಧಿಕ ಮುಂಗಡ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಸೋಮವಾರ ಬೆಳಿಗ್ಗೆ ಈ ತಂಡವು ದಿಢೀರ್‌ ಪರಾರಿಯಾಗಿದ್ದು, ಈ ಸುದ್ದಿ ತಿಳಿದು ಮುಂಗಡ ಹಣ ನೀಡಿದ ಗ್ರಾಹಕರು ಚಿಂತೆಗೀಡಾಗಿದ್ದಾರೆ. ಅಲ್ಲದೆ, ಈ ಮಳಿಗೆಯಲ್ಲಿನ ಸಾಮಗ್ರಿಗಳನ್ನು ಕೆಲವು ಗ್ರಾಹಕರು ಒತ್ತೊಯ್ದುದ್ದಾರೆಂದು ತಿಳಿದುಬಂದಿದೆ. ಇನ್ನೂ ಕೆಲವರು ನಮ್ಮ ಹಣ ಹೋಯಿತಲ್ಲಾ ಎಂದು ಚಿಂತೆಗೊಳಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪಟ್ಟಣದ ಪೊಲೀಸ್ ಠಾಣೆ ಪಿಐ ಹೊಸಕೇರಪ್ಪ ಅವರು ಸ್ಥಳ ಪರಿಶೀಲಿಸಿ ನಂತರ ಅವರು ಗ್ರಾಹಕರಿಗೆ, ನಿಮ್ಮ ಹಣದ ಬಗ್ಗೆ 190 ಗೆ ಕಾಲ್ ಮಾಡಿ ಆನ್ಲೈನ್ ಸೈಬರ್ ದೂರು ದಾಖಲಿಸಿ ನಿಮ್ಮೆಲ್ಲ ಮಾಹಿತಿ ನೀಡಿ, ನಗದು ಮುಂಗಡ ಹಣ ನೀಡಿದವರು ಠಾಣೆಗೆ ದೂರು ನೀಡಿ ಮುಂದಿನ ಕ್ರಮಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.ಈಗಾಗಲೇ ವಂಚನೆಗೆ ಒಳಗಾದ ನೂರಾರು ಗ್ರಾಹಕರು ಪಂಗನಾಮ ಹಾಕಿ ಹೋದವರಿಂದ ಪಡೆದ ರಶೀದಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿ ದೂರು ದಾಖಲಿಸುತ್ತಿದ್ದಾರೆ. ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾದವರನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ಬಲೆ ಬಿಸಿ ತನಿಖೆ ಚುರುಕುಗೊಳಿಸಿದೆ.---20ಹಟ್ಟಿಚಿನ್ನದಗಣಿ01: ಹಟ್ಟಿ ಪಟ್ಟಣದಲ್ಲಿರುವ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಮಳಿಗೆ ನೋಟ ಹಾಗೂ ಗ್ರಾಹಕರಿಂದ ಮುಂಗಡ ಹಣ ಪಡೆದಿರುವ ಇವರು ರಶೀದಿ ನೀಡಿರುವುದು.