ಗ್ರಾಹಕ ಜಾಗೃತನಾದರೆ ಮೋಸ ತಡೆಗಟ್ಟಲು ಸಾಧ್ಯ: ನ್ಯಾ.ನೇರಳೆ ವೀರಭದ್ರಯ್ಯ ಭವಾನಿ

| Published : Jan 26 2024, 01:45 AM IST

ಗ್ರಾಹಕ ಜಾಗೃತನಾದರೆ ಮೋಸ ತಡೆಗಟ್ಟಲು ಸಾಧ್ಯ: ನ್ಯಾ.ನೇರಳೆ ವೀರಭದ್ರಯ್ಯ ಭವಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕ ಹಕ್ಕುಗಳು ಮತ್ತು ಕಾನೂನು ನಿಯಮಾವಳಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ದೇಶದಲ್ಲಿ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ ಆಚರಿಸಲಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ 1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಈ ಮೂಲಕ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕನೇ ಶ್ರೇಷ್ಠ. ಪ್ರತಿಯೊಬ್ಬ ನಾಗರಿಕ, ಗ್ರಾಹಕನೂ ಹೌದು. ಮಾರುಕಟ್ಟೆಯು ತನ್ನದೇ ಆದ ನೀತಿ, ನಿಯಮ ಹಾಗೂ ಮೌಲ್ಯಗಳಿಂದ ನಡೆಯುತ್ತದೆ. ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರು ಕನಿಷ್ಠ ಜ್ಞಾನವನ್ನು ಹೊಂದಿರದಿದ್ದಲ್ಲಿ ಮೋಸಕ್ಕೊಳಗಾಗುವ ಸಾಧ್ಯತೆಗಳಿವೆ. ಇದೇ ಕಾರಣದಿಂದ ಗ್ರಾಹಕರ ರಕ್ಷಣೆಗಾಗಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಆತನಿಗೆ ಕೆಲವೊಂದು ಹಕ್ಕುಗಳನ್ನು ಸಹ ನೀಡಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನೇರಳೆ ವೀರಭದ್ರಯ್ಯ ಭವಾನಿ ಹೇಳಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಪಂನ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ”ಯನ್ನು ಉಧ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕ ಹಕ್ಕುಗಳು ಮತ್ತು ಕಾನೂನು ನಿಯಮಾವಳಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ದೇಶದಲ್ಲಿ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ ಆಚರಿಸಲಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ 1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಈ ಮೂಲಕ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳ ಹೋರಾಟ ನಡೆಸಬಹುದು ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಆರ್.ಶ್ರೀನಿವಾಸ್‌ ಮಾತನಾಡಿ, ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ಈ ದಿನದಂದು ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವ ಗುರಿ ಹೊಂದಿದೆ. ವ್ಯಾಪಾರ ಪದ್ಧತಿಗಳಲ್ಲಿನ ಅನ್ಯಾಯದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಇದು ಗ್ರಾಹಕರಿಗೆ ಶಿಕ್ಷಣ ನೀಡುತ್ತದೆ. ಗ್ರಾಹಕರಿಗೆ ಯಾವುದೇ ಅನ್ಯಾಯವಾದಲ್ಲಿ ನೀವು ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ನಿಮಗಾದ ಅನ್ಯಾಯಕ್ಕೆ ನ್ಯಾಯ ಹಾಗೂ ಪರಿಹಾರ ಕೇಳಬಹುದು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಅರುಣಾಕುಮಾರಿ ಪ್ರತಿಜ್ಞಾವಿಧಿ ಭೋಧಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸೈಯದ್ ಅನ್ಸರ್ ಕಲೀಂ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ. ಪೊಲೀಸ್ ಉಪಾಧೀಕ್ಷಕ ಎಸ್.ಶಿವಕುಮಾರ್‌, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಎಚ್.ಜನಾರ್ಧನ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಸವಿತ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ರವೀಶ್‌ ಚಂದ್ರ, ಕೆಎಫ್ ಸಿಎಸ್ ಸಿ ಜಿಲ್ಲಾ ವ್ಯವಸ್ಥಾಪಕ ವಿಜಯ್ ಕುಮಾರ್, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯದರ್ಶಿ ಅಶ್ವತ್ಥ ನಾರಾಯಣಶೆಟ್ಟಿ, ಪ್ಯಾನಲ್‌ ವಕೀಲರಾದ ಮಂಜುನಾಥರೆಡ್ಡಿ,ಸೃಜನ್ ಗಾಂಧಿ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಮತ್ತಿತರರಿದ್ದರು.

------ಬಾಕ್ಸ್....

ಸಾರ್ವಜನಿಕರು ಗ್ರಾಹಕ ಹಕ್ಕುಗಳನ್ನು ತಿಳಿಸಿಕೊಳ್ಳಿ

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ನಾವು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿಯಿಂದ ಗ್ರಾಹಕ ಹಕ್ಕುಗಳು ಅವಶ್ಯ. ಮಾರುಕಟ್ಟೆಯು ಕೆಲವು ನೈತಿಕತೆಗಳು ಹಾಗೂ ಮೌಲ್ಯಗಳ ಮೇಲೆ ನಡೆಯಬೇಕು. ಕೆಲವೊಮ್ಮೆ ಗ್ರಾಹಕರ ಹಕ್ಕುಗಳ ತಿಳಿದಿರದೇ ಇರುವುದು ಕೂಡ ನಮಗೆ ಒಳಿತಲ್ಲ. ಇದನ್ನು ಜನ ದುರುಪಯೋಗಪಡಿಸಿಕೊಳ್ಳಲೂಬಹುದು. ಹಕ್ಕುಗಳ ಬಗ್ಗೆ ತಿಳಿದುಕೊಳ್ಳವುದು ಗ್ರಾಹಕರಾಗಿ ನಮ್ಮ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ನೈತಿಕ ಹರಿವನ್ನು ಸಕ್ರಿಯಗೊಳಿಸಲು ನಮಗೆ ಸಹಾಯ ಮಾಡುತ್ತದೆ. ಸರ್ಕಾರವು ಗ್ರಾಹಕರ ಹಕ್ಕುಗಳು ಮತ್ತು ಆ ಹಕ್ಕುಗಳ ರಕ್ಷಣೆಗೆ ಒತ್ತು ನೀಡುತ್ತಲೇ ಇರುತ್ತದೆ. ಗ್ರಾಹಕರು ಅಂದರೆ ನಾವು ಈ ಹಕ್ಕುಗಳ ಬಗ್ಗೆ ಶಿಕ್ಷಣ ಪಡೆಯುವುದು ಮತ್ತು ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಭ್ಯಾಸ ಮಾಡುವುದು ಮುಖ್ಯವಾಗುತ್ತದೆ. ಇ- ಕಾಮರ್ಸ್ ಮತ್ತು ಡಿಜಿಟಲ್ ವ್ಯಾಪಾರದ ಯುಗದಲ್ಲಿ ಗ್ರಾಹಕರ ರಕ್ಷಣೆ ಎಂಬ ಘೋಷ ವಾಕ್ಯದೊಂದಿಗೆ 2024ರ ಗ್ರಾಹಕರ ದಿನವನ್ನು ಆಚರಿಸುತ್ತಿದ್ದೇವೆ. ಇಲ್ಲಿ ಗ್ರಾಹಕರಿಗೆ ರಕ್ಷಣೆ ನೀಡುವುದು ಸವಾಲಾಗಿ ಪರಿಣಮಿಸುತ್ತಿದೆ. ಈಗ 50 ಲಕ್ಷದವರೆಗೂ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿದೆ ಎಂದರು.

---------

ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆಗೆ ನ್ಯಾ.ನೇರಳೆ ವೀರಭದ್ರಯ್ಯ ಭವಾನಿ ಚಾಲನೆ ನೀಡಿದರು.