ವಂಚನೆಗೆ ಬಳಸಿದ ಬ್ಯಾಂಕ್ ಖಾತೆಯ ಮಹಿಳಾ ಖಾತೆದಾರಳನ್ನು ಪತ್ತೆಹಚ್ಚಿರುವ ಪೊಲೀಸರು, ಆಕೆಗೆ ನೋಟಿಸ್ ಜಾರಿ ಮಾಡಿದ್ದಾರೆ.

₹60 ಸಾವಿರ ವಂಚನೆ ಪ್ರಕರಣ: ಖಾತೆದಾರಳಿಗೆ ನೋಟಿಸ್

36ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾವಣೆ; ಗ್ಯಾಂಗ್‌ ಜಾಲ ಬಯಲಿಗೆ?

-ಖಾತೆದಾರಳಾದ ಸೈದಾ ತಸ್ಲಿಮಾಗೆ ನೋಟಿಸ್ ಜಾರಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಬಡ ಎಂಬಿಬಿಎಸ್ ಪ್ರತಿಭಾವಂತ ವಿದ್ಯಾರ್ಥಿಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ನೆರವು ನೀಡುವುದಾಗಿ ನಂಬಿಸಿ ₹60 ಸಾವಿರ ವಂಚಿಸಿದ ಪ್ರಕರಣದ ತನಿಖೆಯನ್ನು ಕೊಪ್ಪಳ ಸೈಬರ್ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ವಂಚನೆಗೆ ಬಳಸಿದ ಬ್ಯಾಂಕ್ ಖಾತೆಯ ಮಹಿಳಾ ಖಾತೆದಾರಳನ್ನು ಪತ್ತೆಹಚ್ಚಿರುವ ಪೊಲೀಸರು, ಆಕೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಬೆಂಗಳೂರಿನ ವಿಳಾಸ ಹೊಂದಿರುವ ಸೈದಾ ತಸ್ಲಿಮಾ ಎಂಬ ಮಹಿಳೆಯ ಬ್ಯಾಂಕ್ ಖಾತೆಗೆ ವಂಚನೆಯ ₹60 ಸಾವಿರ ಜಮೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಆಕೆಗೆ ಕರೆ ಮಾಡಿ ವಿಚಾರಣೆ ನಡೆಸಿರುವ ಪೊಲೀಸರು, ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಹಾಜರಾಗುವುದಾಗಿ ಆಕೆ ತಿಳಿಸಿದ್ದಾಳೆ.

36ಕ್ಕೂ ಹೆಚ್ಚು ಖಾತೆಗಳಿಗೆ ವರ್ಗಾವಣೆ:

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹೆಸರಿನಲ್ಲಿ ಕರೆ ಮಾಡಿರುವ ವಂಚಕರು, ಅದೇ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿ ವಿದ್ಯಾರ್ಥಿಯನ್ನು ನಂಬಿಸಿದ್ದಾರೆ. ನೆರವು ನೀಡುವ ಮೊದಲು ಜಿಎಸ್‌ಟಿ ಪಾವತಿಸಬೇಕೆಂದು ಹೇಳಿ, ಫೋನ್‌ಪೇ ಮೂಲಕ ಸೈದಾ ತಸ್ಲಿಮಾ ಅವರ ಖಾತೆಗೆ ₹60 ಸಾವಿರ ವರ್ಗಾಯಿಸಿಸಿಕೊಂಡಿದ್ದಾರೆ.

ಹಣ ಖಾತೆಗೆ ಜಮೆಯಾದ ಕ್ಷಣಾರ್ಧದಲ್ಲೇ ಅದನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಹೀಗೆ 36ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ಮೂಲಕ ಹಣದ ವಹಿವಾಟು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹಣ ವರ್ಗಾವಣೆಯಾದ ಖಾತೆಗಳಿಂದಲೂ ವಿವಿಧ ಕಾರಣಗಳಿಗೆ ಹಣ ವ್ಯಯಿಸಲಾಗಿದೆ.

ವಂಚನೆಗೆ ಬಳಸಿರುವ ಹಲವು ಬ್ಯಾಂಕ್ ಖಾತೆಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಒಟ್ಟು ಸುಮಾರು ₹11 ಸಾವಿರ ಮಾತ್ರ ಉಳಿದಿದ್ದು, ಹಣದ ಮುಂದಿನ ವರ್ಗಾವಣೆಗೆ ಪೊಲೀಸರು ತಡೆ ಹಾಕಿದ್ದಾರೆ.

ಸ್ಥಳೀಯರ ಹೆಸರಿನಲ್ಲಿ ನಕಲಿ ಖಾತೆ?:

ವಂಚನೆ ಮಾಡುವ ಗ್ಯಾಂಗ್‌ಗಳು ಸ್ಥಳೀಯರನ್ನು ಹಣದ ಆಮಿಷವೊಡ್ಡಿ ಬ್ಯಾಂಕ್ ಖಾತೆ ತೆರೆಯಲು ಬಳಸಿಕೊಳ್ಳುತ್ತವೆ. ಖಾತೆ ತೆರೆಯುವಾಗ ತಾವೇ ನೀಡುವ ಮೊಬೈಲ್ ಸಿಮ್ ಹಾಗೂ ದಾಖಲೆಗಳನ್ನು ಬಳಸುವಂತೆ ಮಾಡುತ್ತವೆ. ಬಳಿಕ ಖಾತೆಯ ವಹಿವಾಟನ್ನು ತಾವೇ ನಿರ್ವಹಿಸುತ್ತವೆ. ಹೀಗಾಗಿ ನೈಜ ಆರೋಪಿಗಳನ್ನು ಪತ್ತೆಹಚ್ಚುವುದು ಸೈಬರ್ ಪೊಲೀಸರಿಗೆ ಸವಾಲಾಗಿದೆ.

ಮಠದ ಹೆಸರಿನ ದುರ್ಬಳಕೆ:

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹೆಸರಿನಲ್ಲಿ ವಂಚನೆ ನಡೆಸಿರುವ ಗ್ಯಾಂಗ್, ಧಾರ್ಮಿಕ ಸಂಸ್ಥೆಗಳ ಹೆಸರಿಗೂ ಮಸಿ ಬಳಿಯುವ ಪ್ರಯತ್ನ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಭಕ್ತರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಹಣ ವಂಚಿಸಿರುವುದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾಗ್ಯನಗರದ ಪ್ರತಿಭಾವಂತ ವಿದ್ಯಾರ್ಥಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಖಾತೆದಾರಳನ್ನು ಪತ್ತೆಹಚ್ಚಿ ನೋಟಿಸ್ ಜಾರಿ ಮಾಡಲಾಗಿದೆ. ಆಕೆ ವಿಚಾರಣೆಗೆ ಹಾಜರಾದ ಬಳಿಕ ಪ್ರಕರಣದ ಮತ್ತಷ್ಟು ವಿವರಗಳು ಬೆಳಕಿಗೆ ಬರಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.ವಂಚನೆ ಮಾಡುವವರಿಗೆ ಪ್ರತಿಭಾವಂತ ವಿದ್ಯಾರ್ಥಿ, ಬಡ ವಿದ್ಯಾರ್ಥಿ ಎಂಬ ಅರಿವು ಇರುವುದಿಲ್ಲ. ಈ ಪ್ರಕರಣದಲ್ಲಿ ಖಾತೆದಾರಳನ್ನು ಪತ್ತೆಹಚ್ಚಿ ನೋಟಿಸ್ ಜಾರಿ ಮಾಡಿದ್ದೇವೆ. ತನಿಖೆ ಮುಂದುವರಿದಿದೆ.

ಆಂಜನೇಯ, ಪಿಐ, ಸೈಬರ್ ಠಾಣೆ, ಕೊಪ್ಪಳ