ಅಂಜನಾದ್ರಿ ಟ್ರೇಡರ್ಸ್ ಹೆಸರಲ್ಲಿ ಭತ್ತ ಖರೀದಿಸಿ ರೈತರಿಗೆ ವಂಚನೆ

| Published : Dec 29 2023, 01:30 AM IST

ಸಾರಾಂಶ

ಗಂಗಾವತಿ ಶ್ರೀಚೆನ್ನಬಸವಸ್ವಾಮಿ ಗಂಜ್ ಪ್ರದೇಶದಲ್ಲಿರುವ ಅಂಜನಾದ್ರಿ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ಖರೀದಿದಾರರೊಬ್ಬರು ಲಕ್ಷಾಂತರ ರುಪಾಯಿ ಮೊತ್ತದ ಭತ್ತ ಖರೀದಿಸಿ ರೈತರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಗಂಗಾವತಿ: ನಗರದ ಶ್ರೀಚೆನ್ನಬಸವಸ್ವಾಮಿ ಗಂಜ್ ಪ್ರದೇಶದಲ್ಲಿರುವ ಅಂಜನಾದ್ರಿ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ಖರೀದಿದಾರರೊಬ್ಬರು ಲಕ್ಷಾಂತರ ರುಪಾಯಿ ಮೊತ್ತದ ಭತ್ತ ಖರೀದಿಸಿ ರೈತರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.ಈಗ ರೈತರು ಭತ್ತ ಖರೀದಿಸಿದ ಹಣ ನೀಡುವಂತೆ ಒತ್ತಾಯಿಸಿ ಎಪಿಎಂಸಿ ಮುಂಭಾಗ ರೈತರು ಸೇರಿದಂತೆ ಮಹಿಳೆಯರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಂಪ್ಲಿ ಪುರಸಭೆ ಸದಸ್ಯ ಹಾಗೂ ರೈತ ಸಿ.ಆರ್. ಹನುಮಂತಪ್ಪ ಮಾತನಾಡಿ, ಅಂಜನಾದ್ರಿ ಟ್ರೇಡರ್ಸ್ ಮಾಲೀಕ ರಾಜೇಶ ಬಾಪುರೆಡ್ಡಿ ಕ್ಯಾಂಪ್ ಇವರು ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ರೈತರಿಂದ ಕಳೆದ 8 ತಿಂಗಳಿನಿಂದ ಸಾವಿರಾರು ಭತ್ತ ಚೀಲಗಳನ್ನು ಖರೀದಿಸಿದ್ದಾರೆ. 30 ರೈತರಿಗೆ ವಂಚನೆ ಮಾಡಿದ್ದು, ಹಣ ನೀಡಲು ಸತಾಯಿಸುತ್ತಿದ್ದಾರೆಂದು ಅರೋಪಿಸಿದರು.ಕಳೆದ 2-3 ವರ್ಷಗಳಿಂದ ಭತ್ತ ಖರೀದಿಸುತ್ತಾ ಬಂದಿದ್ದ ಖರೀದಿದಾರ ರಾಜೇಶ್ ರೈರೊಂದಿಗೆ ಭತ್ತದ ವ್ಯವಹಾರ ಮಾಡಿದ್ದಾರೆ. ಈಗ ರೈತರಿಗೆ 8 ತಿಂಗಳಿನಿಂದ ₹25 ಲಕ್ಷ ನೀಡದೇ ಹಾರಿಕೆ ಉತ್ತರ ನೀಡುತ್ತಿದ್ದಾರೆಂದು ದೂರಿದರು.ಈ ಹಿಂದೆ ಭತ್ತಕ್ಕೆ ಬೆಲೆ ಇರಲಿಲ್ಲ. ಈಗ ಭತ್ತಕ್ಕೆ ಅಧಿಕ ಬೆಲೆ ಬಂದಿದ್ದರಿಂದ ಭತ್ತ ಸಂಗ್ರಹಿಸಿ ರೈತರಿಗೆ ಹಣ ನೀಡದೇ ಸುಳ್ಳು ಹೇಳುತ್ತಿದ್ದಾರೆಂದು ದೂರಿದರು.ಇನ್ನೋರ್ವ ರೈತ ಮಹೇಶ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಖರೀದಿಸಿದ ಭತ್ತದ ಹಣ ನೀಡುವಂತೆ ಅಂಗಡಿಗೆ ತೆರಳಿ ವಿಚಾರಿಸಿದರೆ ಕೊಡುತ್ತೇನೆ ಎಂದು ದಿನಗಳನ್ನು ಮುಂದಕ್ಕೆ ಹಾಕಿ ಕೊಡುತ್ತಿಲ್ಲ. ಹಣ ಕೇಳಿದರೆ ಗೂಂಡಾಗಳನ್ನು ಕರೆಸಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು.ರೈತರಿಗೆ ಹಣ ನೀಡುವ ಬಗ್ಗೆ ಸಿಬಿಎಸ್ ಗಂಜ್ ಪ್ರದೇಶದ ಕೆಲ ನಾಯಕರು ಪಂಚಾಯಿತಿ ಮಾಡಿ ಹಣ ನೀಡುವ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರು ಸಹ ನಾಪತ್ತೆಯಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಕಂಪ್ಲಿ ಭಾಗದ ರೈತರು 15,200 ಚೀಲ ಭತ್ತ ಮಾರಾಟ ಮಾಡಿದ್ದಾರೆ. ಈಗ ಇದರ ಬೆಲೆ ಅಧಿಕವಾಗಿದ್ದು, ರೈತರಿಗೆ ವಂಚನೆ ಮಾಡಿದ್ದಾರೆ. ಕೂಡಲೇ ಎಪಿಎಂಸಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತರಾದ ಜಿ.ರಾಮಣ್ಣ, ಅಂಬಣ್ಣ, ವೆಂಕಟೇಶ, ಬೆಳಗೌಡ ಗೌಡ, ಚಂದ್ರಶೇಖರಗೌಡ, ಆನಂದ, ಕೆಂಚಪ್ಪ, ಮಾರಣ್ಣ, ಶೈಖ್ ಸೇರಿದಂತೆ ರೈತ ಮಹಿಳೆಯರು ಭಾಗವಹಿಸಿದ್ದರು.