ಸಾರಾಂಶ
ವಿವಾಹವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ನಡೆಸಿ ಗರ್ಭಿಣಿಯಾದ ಬಳಿಕ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡಿಎನ್‌ಎ ವರದಿಯಲ್ಲಿ ಮಗುವಿನ ಮತ್ತು ಆರೋಪಿಯ ರಕ್ತದ ಮಾದರಿ ಹೊಂದಿಕೆಯಾಗಿದ್ದು, ಆತನೇ ಮಗುವಿನ ತಂದೆ ಎಂಬುದು ಸ್ಪಷ್ಟಗೊಂಡಿದೆ.
ಸಂತ್ರಸ್ತೆಯೊಂದಿಗೆ ವಿವಾಹವಾಗಲಿ ಎಂಬುದು ನಮ್ಮ ಒತ್ತಾಸೆ: ಕೆ.ಪಿ. ನಂಜುಂಡಿಕನ್ನಡಪ್ರಭ ವಾರ್ತೆ ಪುತ್ತೂರು
ವಿವಾಹವಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ನಡೆಸಿ ಗರ್ಭಿಣಿಯಾದ ಬಳಿಕ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡಿಎನ್‌ಎ ಪರೀಕ್ಷೆಯ ವರದಿ ಹೊರಬಿದ್ದಿದೆ. ವರದಿಯಲ್ಲಿ ಮಗುವಿನ ಮತ್ತು ಆರೋಪಿಯ ರಕ್ತದ ಮಾದರಿ ಹೊಂದಿಕೆಯಾಗಿದ್ದು, ಆತನೇ ಮಗುವಿನ ತಂದೆ ಎಂಬುದು ಸ್ಪಷ್ಟಗೊಂಡಿದೆ ಎಂದು ವಿಶ್ವಕರ್ಮ ಮಹಾ ಮಂಡಲ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ, ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಪಡಿಸಿದರು.ಶ್ರೀಕೃಷ್ಣ ಜೆ. ರಾವ್, ಮಗುವಿನ ತಂದೆ ಎಂಬ ಡಿಎನ್‌ಎ ವರದಿ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಬಗ್ಗೆ ಸಂತ್ರಸ್ತೆಯ ಕುಟುಂಬಕ್ಕೆ ತಿಳಿಸಲಾಗಿದೆ ಎಂಬ ಮಾಹಿತಿ ನೀಡಿದ ಅವರು, ಸಮಾಜದ ಬಡ ಹೆಣ್ಣುಮಗಳ ವಿರುದ್ಧ ಅನ್ಯಾಯ ನಡೆದಿದೆ. ಹಿಂದಿನ ಕಾಲದಲ್ಲಿ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆದಿತ್ತು. ಇಂದಿನ ಕಾಲದಲ್ಲಿ ಡಿಎನ್‌ಎ ಪರೀಕ್ಷೆಯೇ ಅಂತಿಮ ಸತ್ಯ. ಈ ಪ್ರಕರಣದಲ್ಲಿ ವರದಿ ಸ್ಪಷ್ಟವಾಗಿ ಬಂದಿದೆ ಮತ್ತು ಈಗಾಗಲೇ ಕೋರ್ಟ್‌ಗೆ ಸಲ್ಲಿಕೆಯಾಗಿದೆ ಎಂದು ಅವರು ಹೇಳಿದರು.ಶ್ರೀಕೃಷ್ಣ ಜೆ. ರಾವ್, ಸಂತ್ರಸ್ತೆಯೊಂದಿಗೆ ವಿವಾಹವಾಗುವುದು ನಮ್ಮ ಒತ್ತಾಯವಾಗಿದೆ. ಮದುವೆಯಾಗುವುದು ಇಬ್ಬರಿಗೂ ಉತ್ತಮ. ಈ ಪ್ರಕರಣದ ಬಗ್ಗೆ ಹೋರಾಟ ನಡೆಸುಲು ನಮಗೂ ಆಸಕ್ತಿ ಇಲ್ಲ. ಆತನ ಭವಿಷ್ಯ ಈ ಕಾರಣಕ್ಕಾಗಿ ಬಲಿಯಾಗಬಾರದು. ಆದರೂ ಈ ವಿಚಾರದಲ್ಲಿ ಕಾನೂನು ತನ್ನ ಮಾರ್ಗದಲ್ಲಿ ಸಾಗುತ್ತದೆ. ಜಗನ್ನಿವಾಸ್ ರಾವ್ ಅವರು ತಮ್ಮ ಮಗನ ಭವಿಷ್ಯದ ಬಗ್ಗೆ ಅರಿತುಕೊಳ್ಳಬೇಕು. ಆ ಪುಟ್ಟ ಮಗುವಿಗೆ ಅಪ್ಪನ ಪ್ರೀತಿ ಸಿಗಬೇಕು. ಆ ಪುಟ್ಟ ಕಂದನ ನಾಳಿನ ಭವಿಷ್ಯದ ಬಗ್ಗೆ ಅವರು ಯೋಚಿಸಬೇಕು. ಅವರಿಬ್ಬರ ಮದುವೆ ಮಾಡಿ ಮನೆ ತುಂಬಿಸಿಕೊಳ್ಳಬೇಕು. ಇದಕ್ಕಾಗಿ ನಾನು ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು. ಹಿಂದುತ್ವದ ಮೂಲ ಪುತ್ತೂರಿನಲ್ಲಿದೆ. ಇದೀಗ ಹಿಂದುತ್ವದ ಮುಖವಾಗಿ ಕೆಲಸ ಮಾಡುತ್ತಿರುವ ವಿಶ್ವಕರ್ಮ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಹಿಂದೂ ಪರ ಸಂಘಟನೆಗಳಾದ ಆರ್‌ಎಸ್‌ಎಸ್, ಬಜರಂಗದಳ, ಶ್ರೀರಾಮ ಸೇನೆಗಳು ಹಾಗೂ ಹಿಂದೂ ಮುಖಂಡರಾದ ಕಲ್ಲಡ್ಕ ಪ್ರಭಾಕರ ಭಟ್, ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷರು ಎಲ್ಲರೂ ಮುಂದಾಳುತ್ವ ವಹಿಸಿ ಹಿಂದು ಸಮುದಾಯದ ಈ ಬಡ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು. ಶ್ರೀಕೃಷ್ಣ ಜೆ. ರಾವ್ ಸಂತ್ರಸ್ತೆಯನ್ನು ಮದುವೆಯಾಗುಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸಂತ್ರಸ್ತೆಯ ತಾಯಿ ನಮಿತಾ ಆಚಾರ್ಯ ಮಾತನಾಡಿ, ನನ್ನ ಮಗಳ ಮಾತಿನಲ್ಲಿ ಸತ್ಯವಿದೆ ಎಂದು ನಾನು ಈ ಹೋರಾಟ ನಡೆಸಿದೆ. ಸಾಕಷ್ಟು ಕೆಟ್ಟ ಮಾತು, ಅವಮಾನಗಳನ್ನು ಅನುಭವಿಸಿದೆ. ಇದೀಗ ಡಿಎನ್‌ಎ ಪರೀಕ್ಷೆಯಿಂದ ಮಗು ಶ್ರೀಕೃಷ್ಣನದ್ದೇ ಎಂಬುದು ಗೊತ್ತಾಗಿದೆ. ಡಿಎನ್‌ಎ ಮೂಲಕ ಕಾನೂನೇ ಆತ ಮಗುವಿನ ತಂದೆ ಎಂಬುದನ್ನು ತಿಳಿಸಿದೆ. ಇನ್ನಾದರೂ ಅವರು ಮದುವೆ ಮಾಡಿಸಿ ಅವರಿಬ್ಬರನ್ನು ಚೆನ್ನಾಗಿ ಬದುಕುವಂತೆ ಮಾಡಲಿ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆ ಮತ್ತು ಸಂಘದ ಪ್ರಮುಖರು ಉಪಸ್ಥಿತರಿದ್ದರು.