ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು91 ನೇ ವರ್ಷದ ಸಂಭ್ರಮಾಚರಣೆಯಲ್ಲಿ ಇರುವ ಮೈಸೂರು ಆಕಾಶವಾಣಿಯಿಂದ ನ.23 ರಂದು ಆಕಾಶವಾಣಿ 67ನೇ ಸಂಗೀತ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೈಸೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಮಂಜುನಾಥ ಎಸ್.ಬೇದ್ರೆ, ಕಾರ್ಯಕ್ರಮ ನಿರ್ವಾಹಕರಾದ ಎನ್. ಕೇಶವಮೂರ್ತಿ, ಡಾ.ಮೈಸೂರು ಉಮೇಶ್ ಅವರು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ನಗರದ ಆಕಾಶವಾಣಿ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪುನಗರ ಆದಿಚುಂಚನಗಿರಿ ರಸ್ತೆಯ ಗಾನಭಾರತಿ- ವೀಣೆಶೇಷಣ್ಣ ಭವನದಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಕಾರ್ಯಕ್ರಮ ಉದ್ಘಾಟಿಸುವರು. ವಿದ್ವಾನ್ ಎಚ್.ಎಲ್. ಶಿವಶಂಕರಸ್ವಾಮಿ ಅವರು ಮೃದಂಗ ತರಂಗ ಪ್ರಸ್ತುತಪಡಿಸುವರು. ಪಕ್ಕವಾದ್ಯದಲ್ಲಿ ಸಮೀರ್ ರಾವ್- ಕೊಳಲು, ಜ್ಯೋತ್ಸ್ನಾ ಶ್ರೀಕಾಂತ್- ಪಿಟೀಲು, ಸಂಗೀತ್ ಥಾಮಸ್- ಕೀಬೋರ್ಡ್, ಕೆ.ಆದರ್ಶ್ ಶೆಣೈ- ತಬಲ, ಅನುಷ್ ಶೆಟ್ಟಿ- ತಾಳವಾದ್ಯ ಸಾಥ್ ನೀಡುವರು.ನಂತರ ಉನ್ನತ ಶ್ರೇಣಿಯ ವೀಣಾ ವಿದುಷಿ ಡಾ.ಎಸ್.ವಿ.ಸಹನಾ ವೀಣಾ ವಾದನ ಪ್ರಸ್ತುತ ಪಡಿಸುವರು. ಅರ್ಜುನ್ ಕುಮಾರ್- ಮೃದಂಗ, ಜಿ,ಎಸ್. ರಾಮಾನುಜನ್- ಘಟ ಸಾಥ್ ನೀಡುವರು.ಇದೇ ಮೊದಲ ಬಾರಿಗೆ ಆಕಾಶವಾಣಿಯ ಈ ಕಾರ್ಯಕ್ರಮವನ್ನು ಪ್ರಸಾರ ಭಾರತಿ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದು, ದೂರದರ್ಶನವು ಮುದ್ರಿಸಿಕೊಳ್ಳುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ಪ್ರಸಾರ ಮಾಡಲಿದೆ. ಸಾರ್ವಜನಿಕರು, ಸಂಗೀತ ಪ್ರೇಮಿಗಳಿಗೆ ಮುಕ್ತ ಪ್ರವೇಶವಿದೆ. ಯಾವುದೇ ಪಾಸ್, ಟಿಕೆಟ್ ಇರುವುದಿಲ್ಲ ಎಂದರು.ಕೇಂದ್ರದ ಸಂಸ್ಕೃತಿ ಸಚಿವಾಲಯ ಹಾಗೂ ಪ್ರಸಾರ ಭಾರತಿ ವತಿಯಿಂದ ಹಮ್ಮಿಕೊಂಡಿರುವ ಈ ಸಂಗೀತ ಸಮ್ಮೇಳನವು 67ನೇ ಸಮ್ಮೇಳನವಾಗಿದೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪಸರಿಸುವಲ್ಲಿ ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಕಾರಗಳು ಮಹತ್ವ ಪೂರ್ಣ ಪಾತ್ರವನ್ನು ವಹಿಸಿವೆ. ಇದರಜೊತೆಗೆ ಲಘು ಸಂಗೀತಾ ಮತ್ತು ಜನಪದ ಸಂಗೀತಗಳಿಗೂ ಸಮಾನ ಆದ್ಯತೆಯನ್ನು ನೀಡುತ್ತಾ ಬರಲಾಗಿದೆ. ಭಾರತದ ಸಮೃದ್ಧ ಶ್ರೀಮಂತ ಸಂಗೀತ ಪರಂಪರೆಯನ್ನು ಜನಪ್ರಿಯಗೊಳಿಸುವುದು ಈ ಸಮ್ಮೇಳನದ ಗುರುತರ ಉದ್ದೇಶವಾಗಿದೆ. ಸುಪ್ರಸಿದ್ಧ ಗಾಯಕ-ಗಾಯಕಿರಲ್ಲದೇ ಉದಯೋನ್ಮುಖ ಪ್ರತಿಭೆಗಳಿಗೂ ತಮ್ಮ ವಿದ್ವತ್ ಅನ್ನು ಪ್ರಸ್ತುತ ಪಡಿಸಲು ಸಮ್ಮೇಳನ ಪ್ರತಿಷ್ಠಿತ ವೇದಿಕೆಯಾಗಿದೆ ಎಂದರು.ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವನ್ನು ಆಕಾಶವಾಣಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಜನವರಿ ತಿಂಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಹೀಗಾಗಿ ಪ್ರತಿಭೆಗಳಿಗೆ ರಾಷ್ಟ್ರೀಯ ಮನ್ನಣೆ ದೊರೆಯುತ್ತದೆ ಎಂದರು.ಮೈಸೂರು ಆಕಾಶವಾಣಿಯ ಕಾರ್ಯಕ್ರಮಗಳಿಗೆ ವಿದೇಶದಲ್ಲೂ ಅಪಾರ ಮಟ್ಟದಲ್ಲಿ ಶೋತೃಗಳು ಇದ್ದಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಈಗ ಮೈಸೂರು ಆಕಾಶವಾಣಿ ಕಾರ್ಯಕ್ರಮವನ್ನು ಎಲ್ಲ ಕಡೆಯೂ ಆಲಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇಳುಗ ವರ್ಗವೂ ಹೆಚ್ಚಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವು ಹಲವಾರು ವೈವಿಧ್ಯಮಯ ಕಾರ್ಯಕ್ರಮವನ್ನು ನೀಡಲು ಯಾವಾಗಲೂ ಕಾರ್ಯಪ್ರವೃತ್ತರಾಗಿರುತ್ತೇವೆ ಎಂದರು.ತಾಂತ್ರಿಕ ವಿಭಾಗದ ಮುಖ್ಯಸ್ಥ ಪಿ.ಆನಂದನ್, ಕಾರ್ಯಕ್ರಮ ನಿರ್ವಾಹಕ ಶಾಂತಕುಮಾರ್, ರವಿಶಂಕರ್, ಎಚ್.ಎಲ್. ಶಿವಶಂಕರಸ್ವಾಮಿ, ಭಾರತಿ, ರಮಾ ವಿ. ಬೆಣ್ಣೂರು, ಪದ್ಮಾವತಿ ನರಸಿಂಹನ್ ಸುದ್ದಿಗೋಷ್ಠಿಯಲ್ಲಿ ಇದ್ದರು.-- ಬಾಕ್ಸ್---- ಸಂಗೀತ ಧ್ವನಿ ಪರೀಕ್ಷೆ ನಡೆಸುವ ಏಕೈಕ ಸಂಸ್ಥೆ ಆಕಾಶವಾಣಿ--ಇಡೀ ದೇಶದಲ್ಲಿಯೇ ಸಂಗೀತ ಧ್ವನಿ ಪರೀಕ್ಷೆ ನಡೆಸಿ, ಕಲಾವಿದರಿಗೆ ಗ್ರೇಡ್ ನೀಡುವ ಏಕೈಕ ಸಂಸ್ಥೆ ಆಕಾಶವಾಣಿ ಎಂದು ಕಾರ್ಯಕ್ರಮ ನಿರ್ವಾಹಕ ಎನ್. ಕೇಶವಮೂರ್ತಿ ತಿಳಿಸಿದರು. ಶಾಸ್ತ್ರೀಯ ಸಂಗೀತ, ಜನಪದ ಸಂಗೀತ, ಸುಗಮ ಸಂಗೀತ, ಭಾವಗೀತೆ, ಹರಿಕಥೆ, ಕಾವ್ಯವಾಚನದ ಮೂಲಕ ಧ್ವನಿಪರೀಕ್ಷೆ ನಡೆಸಿ, ಸುಮಾರು 3500 ಕಲಾವಿದರಿಗೆ ಗ್ರೇಡ್ ನೀಡಲಾಗಿದೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))