ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಬ್ಬರಿಗೆ ಉಚಿತ ಟಿಕೆಟ್ ನೀಡಿ ಅವರು ತಂದಿದ್ದ ನಾಲ್ಕು ಗಿಳಿಗಳಿಗೆ ತಲಾ ₹111 ರಂತೆ ₹444 ಪ್ರಯಾಣ ಶುಲ್ಕ ವಿಧಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಬೆಂಗಳೂರಿನಿಂದ ಮೈಸೂರಿಗೆ ಕೆಎಸ್ಸಾರ್ಟಿಸಿ ಸಾಮಾನ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ ಅಜ್ಜಿ ಮತ್ತು ಮೊಮ್ಮಗಳಿಗೆ ಬಸ್ ನಿರ್ವಾಹಕ ಶಕ್ತಿ ಯೋಜನೆ ಅಡಿಯಲ್ಲಿ ಶೂನ್ಯ ಮೌಲ್ಯದ ಟಿಕೆಟ್ ನೀಡಿದ್ದಾರೆ.
ಆದರೆ, ಅವರು ತಮ್ಮೊಂದಿಗೆ ತಂದಿದ್ದ ನಾಲ್ಕು ಗಿಳಿ ಮರಿಗಳಿಗೆ ಟಿಕೆಟ್ ಪಡೆಯಬೇಕು ಎಂದು ನಿರ್ವಾಹಕರು ತಿಳಿಸಿದ್ದಾರೆ. ಕೊನೆಗೆ ಮಹಿಳಾ ಪ್ರಯಾಣಿಕರು ಪ್ರತಿ ಗಿಳಿಗೂ ₹111 ರಂತೆ ಒಟ್ಟು ₹444 ಪಾವತಿಸಿ ಟಿಕೆಟ್ ಪಡೆದಿದ್ದಾರೆ.
ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮನುಷ್ಯರನ್ನು ಉಚಿತವಾಗಿ ಕರೆದುಕೊಂಡು ಹೋಗುವ ಕೆಎಸ್ಸಾರ್ಟಿಸಿ, ಪ್ರಾಣಿ, ಪಕ್ಷಿಗಳಿಗೆ ಟಿಕೆಟ್ ನೀಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಟಿಕೆಟ್ ನೀಡಿದ್ದಕ್ಕೆ ಸಮರ್ಥನೆ: ಈ ಬಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳನ್ನು ಕೇಳಿದರೆ, ಶಕ್ತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ.
ಆದರೆ, ಕೆಎಸ್ಸಾರ್ಟಿಸಿ ನಿಯಮದ ಪ್ರಕಾರ ಯಾವುದೇ ಪ್ರಾಣಿ ಅಥವಾ ಪಕ್ಷಿಗಳನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗಬೇಕೆಂದರೆ ಟಿಕೆಟ್ ಮೌಲ್ಯದ ಶೇ.50ರಷ್ಟನ್ನು ಪಾವತಿಸಬೇಕು.
ಅದರಂತೆ ನಿರ್ವಾಹಕರು ಗಿಳಿಗಳನ್ನು ತೆಗೆದುಕೊಂಡು ಹೋಗಲು ಮಹಿಳಾ ಪ್ರಯಾಣಿಕರಿಂದ ಪ್ರಯಾಣ ದರ ಪಡೆದುಕೊಂಡಿದ್ದಾರೆ, ಅದರಲ್ಲಿ ತಪ್ಪಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.