ಹೊಸಪೇಟೆ: ಹಂಪಿ ಉತ್ಸವದ ಸಾಂಸ್ಕೖತಿಕ ವೈಭವ ನಡೆಯಲು ಇನ್ನು ಕೇವಲ ಮೂರು ದಿನಗಳು (ಫೆ.13,14,15) ಮಾತ್ರ ಬಾಕಿ ಉಳಿದಿದೆ. ಈ ಬಾರಿ ಹಂಪಿಕ್ಕೆ ವಿಶೇಷ ಮೆರುಗು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಂಪಿ ಉತ್ಸವಕ್ಕೆ ದೇಶ, ವಿದೇಶ, ವಿವಿಧ ರಾಜ್ಯಗಳಿಂದ ಮತ್ತು ವಿವಿಧ ಜಿಲ್ಲೆಗಳಿಂದ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಈಗಾಗಲೇ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ವೇದಿಕೆ ಸಿದ್ಧಪಡಿಸುವ ಜೊತೆಗೆ ವಿವಿಧ ಸಿದ್ಧತೆಗಳು ಭರದಿಂದ ಸಾಗಿವೆ. ಜಿಲ್ಲಾಡಳಿತವು ಜಿಲ್ಲೆಯ ಪ್ರತಿ ಊರುಗಳಿಂದ ಉತ್ಸವ ನೋಡಲು ಬರುವ ಜನರಿಗಾಗಿ ಫೆ.13ರಂದು ಮೊದಲ ದಿನ ಮಾತ್ರ ಜಿಲ್ಲೆಯ ಎಲ್ಲ ತಾಲೂಕುಗಳಿಂದ 318 ಉಚಿತ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.ಉತ್ಸವದ ಮೊದಲ ದಿನ ಮಾತ್ರ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ ಸೇರಿದಂತೆ ಜಿಲ್ಲೆಯ ಎಲ್ಲ ಕೇಂದ್ರಗಳಿಂದ ಮತ್ತು ಹೋಬಳಿಗಳಿಂದ ಹಂಪಿ ಉತ್ಸವಕ್ಕೆ ಬರುವ ಜನರಿಗಾಗಿ ಉಚಿತ ಬಸ್ ವ್ಯವಸ್ಥೆಗೊಳಿಸಲಾಗಿದೆ.
ಹೊಸಪೇಟೆಯಿಂದ ಹಂಪಿಗೆ ಮೂರು ದಿನನಿತ್ಯ 50 ಬಸ್‌ಗಳು ಹಂಪಿ ಉತ್ಸವಕ್ಕಾಗಿ ಉಚಿತವಾಗಿ ಸಂಚರಿಸಲಿದೆ. ಹೊಸಪೇಟೆ ಬಸ್ ನಿಲ್ದಾಣದಿಂದ ಹಂಪಿಯ ಪಾರ್ಕಿಂಗ್ ಸ್ಥಳದವರೆಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ 50 ಬಸ್‌ಗಳು ಉಚಿತವಾಗಿ ಸಂಚರಿಸಲಿವೆ.ಇದರಲ್ಲಿ 25 ಸಿಟಿ ಬಸ್ (ಮಿನಿ ಬಸ್‌ಗಳು) ಹೊಸಪೇಟೆಯಿಂದ ರೈಲ್ವೆ ಸೇತುವೆ ಒಳಗಿನಿಂದ ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಮಲಪನಗುಡಿ, ಹೊಸಮಲಪನಗುಡಿ, ಗಾಳೆಮ್ಮನಗುಡಿ, ಕಡ್ಡಿರಾಂಪುರ ಮೂಲಕ ಹಂಪಿಗೆ ಉಚಿತ ಬಸ್‌ಗಳು ನಿರಂತರವಾಗಿ ಮೂರು ದಿನಗಳ ಕಾಲ ಸಂಚರಿಸಲಿವೆ.
ಇನ್ನು 25 ಬಸ್‌ಗಳು ಹೊಸಪೇಟೆ ಬಸ್ ನಿಲ್ದಾಣದ ಮೂಲಕ ಬಳ್ಳಾರಿ ರಸ್ತೆ, ಕಾರಿಗನೂರು, ವಡ್ರಹಳ್ಳಿ, ಪಾಪಿನಾಯಕನಹಳ್ಳಿ, ಕಮಲಾಪುರದ ಮೂಲಕ ಹಂಪಿಗೆ ಉಚಿತ ಬಸ್‌ಗಳು ಮೂರು ದಿನಗಳ ಕಾಲ ನಿರಂತರವಾಗಿ ಸಂಚರಿಸಲಿವೆ. ಹಂಪಿಗೆ ಎರಡು ಮಾರ್ಗದ ರಸ್ತೆಯಲ್ಲಿ ಹಂಪಿ ಉತ್ಸವಕ್ಕೆ ಜನರು ಬರುವಂತೆ ವ್ಯವಸ್ಥೆಗೊಳಿಸಲಾಗಿದೆ.
ಪೊಲೀಸ್ ಬಂದೋಬಸ್ತ್:
ಉತ್ಸವದಲ್ಲಿ ಈ ಬಾರಿ ಪೊಲೀಸ್ ಭದ್ರತೆ ಮತ್ತು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಹಂಪಿ ಉತ್ಸವಕ್ಕೆ ಬರುವ ಜನರ ಸುರಕ್ಷತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಂಡಿರುವ ಪೊಲೀಸ್ ಇಲಾಖೆ, ಉತ್ಸವಕ್ಕೆ ಬರುವ ಮಹಿಳೆಯರು ಮತ್ತು ಪ್ರವಾಸಿಗರು ಯಾವುದೇ ಆತಂಕವಿಲ್ಲದೇ ನಿರ್ಭಯವಾಗಿ ಸಂಚರಿಸಿ, ಉತ್ಸವದ ವೇದಿಕೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
ಎಸ್ಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಉತ್ಸವದಲ್ಲಿ ಮಹಿಳೆಯರಿಗೆ ಏನೇ ತೊಂದರೆಯಾದರೆ ತಕ್ಷಣವೇ ನೆರವು ನೀಡುವಂತಹ ಉತ್ಸವದಲ್ಲಿ 10 ಪ್ರಮುಖ ಸ್ಥಳಗಳಲ್ಲಿ ವಿಶೇಷ ಸುರಕ್ಷಾ ದ್ವೀಪ ಸ್ಥಾಪಿಸಲಾಗಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ, ಎದುರು ಬಸವಣ್ಣ ಮಂಟಪ, ಎಂ.ಪಿ. ಪ್ರಕಾಶ್ ವೇದಿಕೆ, ಸಾಸಿವೆ ಕಾಳು ಗಣಪತಿ ವೇದಿಕೆ, ವಿಜಯವಿಠಲ ದೇವಸ್ಥಾನ, ಕಮಲ ಮಹಲ್ ಸೇರಿದಂತೆ ಪ್ರವಾಸಿಗರು ಸೇರುವ ಪ್ರದೇಶದಲ್ಲಿ ಒಟ್ಟು 10 ಸ್ಥಳಗಳಲ್ಲಿ ಪೊಲೀಸ್ ವಿಶೇಷ ತಂಡ ಕಾರ್ಯ ನಿರ್ವಹಿಸಲಿದೆ.ಇದು ಕೇವಲ ಭದ್ರತೆಯಷ್ಟೇ ಅಲ್ಲದೇ ಮಹಿಳೆಯರಿಗೆ ಅಗತ್ಯ ಮಾಹಿತಿ ನೀಡುವ ಮತ್ತು ತುರ್ತು ನೆರವು ನೀಡುವ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸಲಿದೆ.
ಹಂಪಿ ಉತ್ಸವದಲ್ಲಿ ಹೊಸಪೇಟೆಯಿಂದ ಹಂಪಿಗೆ ನಿತ್ಯ ಉಚಿತ 50 ಬಸ್‌ಗಳು ಸಂಚರಿಸಲಿವೆ. ಫೆ.13ರಂದು ಮೊದಲ ದಿನ ಮಾತ್ರ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಒಟ್ಟು 318 ಉಚಿತ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹಂಪಿ ಉತ್ಸವದ ವೇದಿಕೆ ಹತ್ತಿರದಲ್ಲೇ 20 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.ಹಂಪಿ ಉತ್ಸವದ ಪ್ರಮುಖ ಸ್ಥಳಗಳಲ್ಲಿ 250ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಎತ್ತರದ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿ ಜನಸಂದಣಿಯ ಜನರ ಚಲನವಲನವನ್ನು ಪ್ರತಿಯೊಂದರ ಮೇಲೆ ಹದ್ದಿನ ಕಣ್ಣಿರಿಸಿದೆ. ಹಂಪಿ ಉತ್ಸವದ ಭದ್ರತೆಗಾಗಿ 8 ಎಸ್‌ಪಿ, 15 ಡಿವೈಎಸ್‌ಪಿ, 60 ಸಿಪಿಐ ಸೇರಿದಂತೆ ಒಟ್ಟು 1500 ಪೊಲೀಸ್ ಸಿಬ್ಬಂದಿ ಹಾಗೂ 800 ಹೋಮ್ ಗಾರ್ಡ್‌ಗಳು ಕಾರ್ಯ ನಿರ್ವಹಿಸಲಿದ್ದಾರೆ ಎನ್ನುತ್ತಾರೆ ಎಸ್ಪಿ ಎಸ್.ಜಾಹ್ನವಿ.