ಸಾರಾಂಶ
- ಬಂಟರ ಸಂಘದಿಂದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಬಂಟರ ಯಾನೆ ನಾಡವರ ಸಂಘ ಉಚಿತ ಶಿಕ್ಷಣ ನೀಡಲಿದೆ ಎಂದು ರಾಜ್ಯ ಬಂಟರ ಯಾನೆ ನಾಡವರ ಸಂಘದ ರಾಜ್ಯಾಧ್ಯಕ್ಷ ಸಿ.ಎ. ಅಶೋಕ್‌ಕುಮಾರ್ ಹೇಳಿದ್ದಾರೆ.ನಗರದ ಹೊರ ವಲಯದಲ್ಲಿರುವ ಬಂಟರ ಸಂಘದ ಭವನದಲ್ಲಿ ಚಿಕ್ಕಮಗಳೂರು ಬಂಟರ ಯಾನೆ ನಾಡವರ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಸಂಬಂಧ ರಾಜ್ಯ ಬಂಟರ ಸಂಘ ಈಗಾಗಲೇ 132 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂತಹ ಬಡ ವಿದ್ಯಾರ್ಥಿಗಳು ಇದ್ದಲ್ಲಿ ಅಂತಹವರಿಗೆ ಉಚಿತ ಶಿಕ್ಷಣ ನೀಡಲು ರಾಜ್ಯಸಂಘ ಬದ್ದವಾಗಿದ್ದು, ಅಂತಹ ವಿದ್ಯಾರ್ಥಿಗಳಿದ್ದಲ್ಲಿ ಎಲ್ಲಾ ತಾಲೂಕಿನ ಬಂಟರ ಸಂಘದಿಂದ ಹೆಸರು ಸಂಗ್ರಹಿಸಿ ಜಿಲ್ಲಾ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮೂಲಕ ರಾಜ್ಯ ಸಂಘಕ್ಕೆ ಕಳುಹಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು. ಕಳೆದ ಹಲವು ವರ್ಷಗಳಿಂದ ಚಿಕ್ಕಮಗಳೂರು ಬಂಟರ ಯಾನೆ ನಾಡವರ ಸಂಘ ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾರ್ಥಿ ವೇತನ ನೀಡುತ್ತಿರುವ ಕಾರ್ಯ ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಬಂಟರ ನಾಡವರ ಸಂಘದ ವಿದ್ಯಾರ್ಥಿ ವೇತನ ಮತ್ತು ಪ್ರಶಸ್ತಿ ಸಮಿತಿ ಅಧ್ಯಕ್ಷ ಉಮೇಶ್ ಕುಮಾರ್ ಶೆಟ್ಟಿ ಮಾತನಾಡಿ, ರಾಜ್ಯ ಬಂಟರ ಯಾನೆ ನಾಡವರ ಸಂಘದ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ರಾಜ್ಯಾದ್ಯಂತ ವಿಸ್ತರಿಸಲಾಗಿದೆ.ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದಿರುವ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ಕೆ ರಾಜ್ಯ ಸಂಘ ಕರಿಮಣಿ (ಮಾಂಗಲ್ಯ) ನೀಡಲು ಸಿದ್ಧವಿದ್ದು, ಅಂತಹ ಬಡ ಕುಟುಂಬಗಳು ಜಿಲ್ಲಾ ಸಂಘದ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಈ ಸೌಲಭ್ಯ ಪಡೆಯಬಹುದು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ಸಂಘದ ಸದಸ್ಯತ್ವ ಹೆಚ್ಚಳ ಸೇರಿದಂತೆ ಜಿಲ್ಲಾ ಪಂಚಾಯಿತಿ ಕಚೇರಿ ಸಮೀಪ ಸರ್ಕಾರ ನೀಡಿರುವ ನಿವೇಶನವನ್ನು ಸಮತಟ್ಟಗೊಳಿಸಿ, ತಂತಿ ಬೇಲಿ ನಿರ್ಮಿಸಲಾಗಿದೆ. ಇದರ ಜೊತೆಗೆ ಹಾಲಿ ಬಂಟರ ಸಂಘದ ಕಟ್ಟಡದ ಪಕ್ಕ ದಲ್ಲಿರುವ ಜಾಗ ಖರೀದಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಸಂಘದ ಎಲ್ಲಾ ಹಿರಿಯರು ಹಾಗೂ ವಿದ್ಯಾರ್ಥಿ ವೇತನದ ನಿಧಿಗೆ ದಾನ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.ಬಂಟರ ಯಾನೆ ನಾಡವರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಬಲಾರಿ ವಿ. ಶೆಟ್ಟಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ ಸಂಘದ ನಡೆದು ಬಂಬ ಹಾದಿ ವಿವರಿಸಿದರು. ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಶೇಖರ್ ಶೆಟ್ಟಿ, ಸಹ ಕಾರ್ಯದರ್ಶಿ ಸತೀಶ್ ಶೆಟ್ಟಿ, ಬಾಳೆಹೊನ್ನೂರು ಬಂಟರ ಸಂಘದ ಅಧ್ಯಕ್ಷ ವೆಂಕಟೇಶ್, ಕೊಪ್ಪ ತಾಲೂಕು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಶೃಂಗೇರಿ ತಾಲೂಕು ಸಂಘದ ಅಧ್ಯಕ್ಷ ರಾಘವೇಂದ್ರ ಎಸ್.ಶೆಟ್ಟಿ, ಎನ್.ಆರ್. ಪುರ ತಾಲೂಕು ಸಂಘದ ಅಧ್ಯಕ್ಷ ಪ್ರಕಾಶ್‌ಶೆಟ್ಟಿ, ಕಳಸ ಸಂಘದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಹಾಗೂ ಚಿಕ್ಕಮಗಳೂರು ಬಂಟರ ಸಂಘದ ಖಜಾಂಚಿ ದಿವಾಕರ್‌ರೈ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿವೇತನ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ ಸಂಘದ ಸಂಸ್ಥಾಪಕ ಅಧ್ಯಕ್ಷ ಶೇಖರ್‌ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ನರೇಂದ್ರಶೆಟ್ಟಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ದೇವರಾಜ ಶೆಟ್ಟಿ ವಂದಿಸಿದರು. ಮಾಜಿ ಅಧ್ಯಕ್ಷ ಶ್ರೀಕಾಂತ್‌ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 16 ಕೆಸಿಕೆಎಂ 1ಬಂಟರ ಸಂಘದ ಭವನದಲ್ಲಿ ಚಿಕ್ಕಮಗಳೂರು ಬಂಟರ ಯಾನೆ ನಾಡವರ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಸಿ.ಎ. ಅಶೋಕ್‌ಕುಮಾರ್ ಉದ್ಘಾಟಿಸಿದರು.