ಇಂದಿನ ದಿನಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸುಲಭದ ಮಾತಲ್ಲ. ಬಡವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸುವ ಇಂತಹ ಸೇವಾ ಕಾರ್ಯಗಳು ವರದಾನವಾಗಿವೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಕುಷ್ಟಗಿ: ಇಂದಿನ ದಿನಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸುಲಭದ ಮಾತಲ್ಲ. ಬಡವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸುವ ಇಂತಹ ಸೇವಾ ಕಾರ್ಯಗಳು ವರದಾನವಾಗಿವೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಡಾ. ಸುಭಾಸ ಕಾಖಂಡಕಿ ಕಣ್ಣಿನ ಆಸ್ಪತ್ರೆ ಹಾಗೂ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ಶುಕ್ರವಾರ ನಡೆದ ಶ್ರೀಮದ್ ಉತ್ತರಾಧಿ ಮಠದ ಪೀಠಾಧೀಶ ಸತ್ಯಾತ್ಮತೀರ್ಥ ಪಾದಂಗಳವರ 31ನೇ ಚಾತುರ್ಮಾಸ್ಯದ ನಿಮಿತ್ತ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕಾಖಂಡಕಿ ಕುಟುಂಬ ಮಹಿಪತಿದಾಸರ ಮನೆತನವಾಗಿದ್ದು, ಸೇವಾ ಮನೋಭಾವದಿಂದ ಪ್ರತಿವರ್ಷ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ. ಜಾತಿ, ಮತ ಭೇದವಿಲ್ಲದೆ ಎಲ್ಲ ವರ್ಗದವರಿಗೂ ಚಿಕಿತ್ಸೆ ನೀಡುತ್ತಿರುವುದು ಮಾದರಿಯಾಗಿದೆ. ಮಹಿಪತಿದಾಸರು ಬಾಳಿದ ಸ್ಥಳವನ್ನು ಸಂರಕ್ಷಿಸಿ, ಅವರ ಹೆಸರಿನಲ್ಲಿ ಇಂತಹ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದರು. ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಾಖಂಡಕಿ ಕಣ್ಣಿನ ಆಸ್ಪತ್ರೆ ಮೂಲಕ ಇದು ವರೆಗೆ ಸುಮಾರು ಐದು ಸಾವಿರ ಜನರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಮಹತ್ವದ ಸೇವೆಯಾಗಿದೆ. ಪರೋಪಕಾರ ಮಾಡುವವರಿಗೆ ಭಗವಂತನ ಕೃಪೆ ಇರುತ್ತದೆ. ಕಾಖಂಡಕಿ ಕುಟುಂಬದ ಸೇವೆ ಇತರರಿಗೆ ಪ್ರೇರಣೆಯಾಗಿದೆ ಎಂದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬ್ರಾಹ್ಮಣ ಸಮಾಜದವರು ಕಾಖಂಡಕಿ ಅವರೊಂದಿಗೆ ಕೈಜೋಡಿಸಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಿರುವುದು ಮಾದರಿ ಕಾರ್ಯ. ಪ್ರತಿಯೊಬ್ಬರೂ ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಸಾವಿನ ಬಳಿಕ ಮಣ್ಣಿನಲ್ಲಿ ಲೀನವಾಗುವ ಕಣ್ಣುಗಳು ಮತ್ತೊಬ್ಬರ ಬದುಕಿಗೆ ಬೆಳಕಾಗಬಹುದು ಎಂದರು.
ಶಸ್ತ್ರಚಿಕಿತ್ಸೆಗೊಳಗಾದ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಶರಣಪ್ಪ, ದಿಶಾ ಸಮಿತಿ ಸದಸ್ಯ ದೊಡ್ಡಬಸನಗೌಡ ಬಯ್ಯಾಪುರ, ಕಾಂಗ್ರೆಸ್ ಮುಖಂಡ ಲಾಡ್ಲೇಮಷಾಕ ದೋಟಿಹಾಳ, ಬ್ರಾಹ್ಮಣ ಸಮಾಜದ ಅಧ್ಯಕ್ಷ ತಿಮ್ಮಪ್ಪಯ್ಯ ದೇಸಾಯಿ, ಡಾ. ಸುಶೀಲ್ ಕಾಖಂಡಕಿ ದಂಪತಿ, ಜಯತೀರ್ಥ, ಈರಣ್ಣ ಸೋಬರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.