ಸಾರಾಂಶ
ಬೆಂಗಳೂರು : ಮೌಲ್ಯಮಾಪನ ದೋಷದಿಂದ ಪರೀಕ್ಷೆಯಲ್ಲಿ ಪದೇ ಪದೇ ಫೇಲ್ ಆಗುತ್ತಿರುವ ನಮ್ಮ ಪತ್ರಿಕೆಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಿಸಿ ನ್ಯಾಯ ಕೊಡಿಸಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ಎಂಬಿಬಿಎಸ್ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಕಳೆದ 2018ರ ಪೂರ್ವದಲ್ಲಿ ಬೇರೆ ಬೇರೆ ವರ್ಷಗಳಲ್ಲಿ ಪ್ರವೇಶ ಪಡೆದಿರುವ ಹಳೇ ಪಠ್ಯಕ್ರಮದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಪತ್ರಿಕೆಗಳು 5 ಬಾರಿ ಮೌಲ್ಯಮಾಪನಗೊಂಡಿವೆ. ಒಬ್ಬೊಬ್ಬ ಮೌಲ್ಯಮಾಪಕರು ಭಾರಿ ವ್ಯತ್ಯಾಸ ಕಂಡು ಬರುವಂತೆ ಅಂಕಗಳನ್ನು ನೀಡಿದ್ದಾರೆ. ವಿದ್ಯಾರ್ಥಿಯೊಬ್ಬರಿಗೆ ಪತ್ರಿಕೆಯೊಂದರಲ್ಲಿ 2ನೇ ಮೌಲ್ಯಮಾಪನದಲ್ಲಿ 5 ಅಂಕ ನೀಡಿದರೆ, 3ನೇ ಮೌಲ್ಯಮಾಪನದಲ್ಲಿ 62 ಅಂಕ ನೀಡಲಾಗಿದೆ. ಮತ್ತೊಬ್ಬರಿಗೆ 2ನೇ ಮೌಲ್ಯಮಾಪನದಲ್ಲಿ 4 ಅಂಕ ಮತ್ತು 3ನೇ ಮೌಲ್ಯಮಾಪನದಲ್ಲಿ 56 ಅಂಕ ನೀಡಲಾಗಿದೆ. ಹೀಗೆ, ಹಲವು ವಿದ್ಯಾರ್ಥಿಗಳ ಮೌಲ್ಯಮಾಪನದಲ್ಲಿ ದೊಡ್ಡ ವ್ಯತ್ಯಾಸ ಕಂಡು ಬಂದಿದೆ.
ಹಳೇ ಬ್ಯಾಚ್ ಆಗಿರುವ ಕಾರಣ 5 ಹಂತದ ಮೌಲ್ಯಮಾಪನ ಮಾಡಿಸಿ, ಸರಾಸರಿ ಶೇ.50 ಅಂಕ ಗಳಿಸಿದಲ್ಲಿ ಮಾತ್ರ ಉತ್ತೀರ್ಣಗೊಳಿಸಲಾಗುತ್ತದೆ. ಮೌಲ್ಯಮಾಪನದ ನಡುವೆ ದೊಡ್ಡ ಪ್ರಮಾಣದ ಅಂಕ ವ್ಯತ್ಯಾಸವಾಗಲು ಬರಲು ಹೇಗೆ ಸಾಧ್ಯ? ಮೌಲ್ಯಮಾಪಕರ ಅಸಡ್ಡೆಯಿಂದ ಈ ರೀತಿ ಆಗುತ್ತಿದೆ. ನಮ್ಮ ಭವಿಷ್ಯ ಅತಂತ್ರದಲ್ಲಿ ಸಿಲುಕಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಕುಲಸಚಿವ ಡಾ.ರಿಯಾಜ್ ಭಾಷಾ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ.
ಎನ್‌ಎಂಸಿಗೆ ಪತ್ರ ಬರೆಯುವೆ: ಕುಲಸಚಿವರ ಭರವಸೆ
ಎಲ್ಲಾ ಮೌಲ್ಯಮಾಪಕರು ಒಂದೇ ರೀತಿ ಮೌಲ್ಯಮಾಪನ ಮಾಡುವುದಿಲ್ಲ. ಹೀಗಾಗಿ, ಅಂಕ ವ್ಯತ್ಯಾಸವಾಗಿದೆ. ಇವರ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿಗೆ ಪತ್ರ ಬರೆದು ಮನವಿ ಮಾಡುತ್ತಿದ್ದೇವೆ. ಶೀಘ್ರದಲ್ಲೇ ವಿವಿಯ ನಿಯೋಗ ಎನ್‌ಎಂಸಿ ಅಧಿಕಾರಿಗಳನ್ನು ಭೇಟಿ ಮಾಡಲಿದೆ ಎಂದು ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ರಿಯಾಜ್ ಭಾಷಾ ತಿಳಿಸಿದ್ದಾರೆ.