ಸಾರಾಂಶ
ಗದಗ: ಶಿವಾನಂದ ಸ್ವಾಮೀಜಿಗಳ ಸಲಹೆಯಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಯಾವುದೇ ಅನುದಾನವಿಲ್ಲದೇ ಸೇವಾ ಮನೋಭಾವನೆಯಿಂದ ನಮ್ಮ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿ. ಜಿ.ಎಂ. ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾ. ಎಸ್.ಎನ್. ಬೆಳವಡಿ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೀಶ್ವರ ಸಭಾ ಭವನದಲ್ಲಿ 9ನೇ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಅಂಗವಾಗಿ ಗದಗ ಡಿ.ಜಿ.ಎಂ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಗ್ರಾಪಂ ಸಹಯೋಗದಲ್ಲಿ ಲಕ್ಕುಂಡಿಯನ್ನು ಆಯುರ್ವೇದ ದತ್ತು ಗ್ರಾಮವನ್ನಾಗಿ ಪಡೆದುಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ಆಯುರ್ವೇದಿಕ್ ಆಸ್ಪತ್ರೆಯ ತಜ್ಞ ವೈದ್ಯರು, ಉಪನ್ಯಾಸಕರು ಪ್ರತಿ ತಿಂಗಳು ಗ್ರಾಮದಲ್ಲಿ ಉಚಿತವಾಗಿ ಆರೋಗ್ಯ ಶಿಬಿರ, ಆರೋಗ್ಯ ಜಾಗೃತಿ, ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಉಪನ್ಯಾಸ ಕಾರ್ಯಕ್ರಮಗಳು ಸೇರಿದಂತೆ ಗ್ರಾಮದ ಜನರ ಆರೋಗ್ಯ ಸುಧಾರಣೆಗಾಗಿ ಬೇಕಾಗುವ ಹಲವಾರು ಕಾರ್ಯ ಚಟುವಟಿಕೆ ನಡೆಸಲಿದ್ದಾರೆ. ಆದ್ದರಿಂದ, ಗ್ರಾಮಸ್ಥರು ಸಹಾಯ, ಸಹಕಾರ ನೀಡಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮೃತ ಹರಿದಾಸರ ಮಾತನಾಡಿ, ದೈನಂದಿನ ಚಟುವಟಿಕೆಯಿಂದ ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆದ್ದರಿಂದ ವೈದ್ಯರ ಸಲಹೆಯಂತೆ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ದಿಸೆಯಲ್ಲಿ ಅವಶ್ಯವಿದ್ದರೆ ಮಾತ್ರ ಔಷಧ ತೆಗೆದುಕೊಳ್ಳಬೇಕು. ಔಷಧ ಹಾಕುವರು ವೈದ್ಯರಲ್ಲ. ಔಷಧ ಬಿಡಿಸುವವರು ವೈದ್ಯರು. ಆಯುರ್ವೇದ ಔಷಧ ರೋಗ ಬೇರು ಸಮೇತವಾಗಿ ಕಿತ್ತು ಹಾಕುವ ಪಧ್ಧತಿಯಾಗಿದ್ದು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು ಎಂದರು.ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸರ್ಕಾರ ಜನರ ಆರೋಗ್ಯ ರಕ್ಷಣೆಗಾಗಿ ಹತ್ತು ಹಲವಾರು ಯೋಜನೆ ಜಾರಿಗೆ ತಂದಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಹಾಯದೊಂದಿಗೆ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರು ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಇದನ್ನು ಮೀರಿ ಡಿ.ಜಿ.ಎಂ. ಆರ್ಯುವೇದ ಆಸ್ಪತ್ರೆ ತಜ್ಞ ವೈದ್ಯರು ನಮ್ಮ ಗ್ರಾಮವನ್ನು ದತ್ತು ಪಡೆದು ಜನರ ಆರೋಗ್ಯ ರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಡಾ. ಶಶಿಧರ ಎಮ್ಮಿ, ಡಾ.ಕುಮಾರ ಕಂಠಿಮಠ, ಡಾ.ಎಂ.ವಿ. ಸೋಗಿನ, ಡಾ. ವೀಣಾ ಕೋರಿ, ಡಾ. ಮಮತಾ ಕಟಾದಕರ್, ಡಾ. ಅಶ್ವಿನಿ ಹೊಸಗನ್ನವರ, ಪಿಡಿಒ ರಾಜಕುಮಾರ ಭಜಂತ್ರಿ, ಗ್ರಾಪಂ ಸದಸ್ಯರು ಇದ್ದರು.ಕವಿತಾ ಬಡಿಗೇರ ಪ್ರಾರ್ಥಿಸಿದರು. ಆಯುರ್ವೆದ ಕಾಲೇಜ್ ವಿದ್ಯಾರ್ಥಿನಿಯರು ಧನ್ವಂತರಿ ಸ್ತ್ರೋತ್ರ ಹೇಳಿದರು. ತುಕಾರಾಮ ಹುಲಗಣ್ಣವರ ನಿರೂಪಿಸಿದರು. ಡಾ.ಸುವರ್ಣ ನಿಡಗುಂದಿ ವಂದಿಸಿದರು.
9ನೇ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಅಂಗವಾಗಿ ಗದಗ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ ಜಿಲ್ಲೆಯಲ್ಲಿ ಲಕ್ಕುಂಡಿ, ಹೊಂಬಳ, ಲಿಂಗದಾಳ, ಮಲ್ಲಸಮುದ್ರ, ನಾಗಾವಿ ಗ್ರಾಮಗಳನ್ನು ಡಿಜಿಎಂ ಆಯುರ್ವೇದ ಕಾಲೇಜು ದತ್ತು ಪಡೆದುಕೊಡು ಜನರ ಆರೋಗ್ಯ ಸುಧಾರಣೆಗಾಗಿ ಸಾಮಾಜಿಕ ಸೇವೆ ಮಾಡುತ್ತಿದೆ ಎಂದು ತಜ್ಞ ವೈದ್ಯ ಬೂದೇಶ ಕನಾಜ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))