ಸಾರಾಂಶ
ಓದಿನಲ್ಲಿ ಏಕಾಗ್ರತೆಗೆ, ಆಟ, ಯೋಗ, ಪ್ರಾಣಾಯಾಮ ಹಾಗೂ ವ್ಯಾಯಾಮ ಪೂರಕ. ಆಟ, ಊಟ ಮತ್ತು ಪಾಠಗಳತ್ತ ಮಕ್ಕಳು ಗಮನ ಹರಿಸಬೇಕು. ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆಯ ಮಹತ್ವ ಹಾಗೂ ದುಶ್ಚಟಗಳಿಂದ ದೂರವಿರಬೇಕು.
ಶಿರಸಿ:
ರಾಷ್ಟ್ರೀಯ ಆಯುಷ್ ಅಭಿಯಾನದಡಿ ತಾಲೂಕಿನ ಬನವಾಸಿಯ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮತ್ತು ಸಮಾಜ ಕಲ್ಯಾಣ ಇಲಾಖೆ ಬಾಲಕರ ವಸತಿ ಗೃಹದಲ್ಲಿ ಇತ್ತೀಚಿಗೆ ಆಯುಷ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ ಉಚಿತ ಆಯುರ್ವೇದ ತಪಾಸಣೆ ಮತ್ತು ಔಷಧಿ ವಿತರಣಾ ಕಾರ್ಯಕ್ರಮ ಶಿರಸಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವತಿಯಿಂದ ನಡೆಯಿತು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೇಶವಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಮುಂದಿನ ಗುರಿ ಸಾಧನೆಗೆ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯ. ರೋಗ ಬಂದಾಗ ಔಷಧಿ ಅಗತ್ಯವಿರುತ್ತದೆ. ಅಂಗಾಂಗಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಬದುಕುವುದು ಆರೋಗ್ಯಕ್ಕೆ ಮುಖ್ಯ ಎಂದರು.
ಶಿರಸಿ ಸರಕಾರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಮಾತನಾಡಿ, ಓದಿನಲ್ಲಿ ಏಕಾಗ್ರತೆಗೆ, ಆಟ, ಯೋಗ, ಪ್ರಾಣಾಯಾಮ ಹಾಗೂ ವ್ಯಾಯಾಮ ಪೂರಕ ಎಂದರು. ಆಟ, ಊಟ ಮತ್ತು ಪಾಠಗಳತ್ತ ಮಕ್ಕಳು ಗಮನ ಹರಿಸಬೇಕು. ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಸೇವನೆಯ ಮಹತ್ವ ಹಾಗೂ ದುಶ್ಚಟಗಳಿಂದ ದೂರ ಇರುವಂತೆ ಮಕ್ಕಳಿಗೆ ವಿವರಿಸಿದರು.ಯೋಗದ ಮಾಹಿತಿ ಇರುವ ಕೈಪಿಡಿ ವಿತರಿಸಲಾಯಿತು. ವಸತಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಸನ್ನ ಹೆಗಡೆ ಸ್ವಾಗತಿಸಿದರು. ಸಹಶಿಕ್ಷಕಿ ಸುಮಾ ಪರಶುರಾಮ ಕಾರ್ಯಕ್ರಮ ನಿರೂಪಣೆ ಮಾಡಿದರು, ಶಿಕ್ಷಕಿ ವೀಣಾ ನಾಯಕ ವಂದಿಸಿದರು. ಶಿರಸಿ ಸರಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ, ಡಾ. ಭಾಗ್ಯಲಕ್ಷ್ಮೀ ಕೆ, ಡಾ. ಸುಮನಾ, ಸಮಾಜ ಕಲ್ಯಾಣ ಇಲಾಖೆಯ ಸುಧಾಕರ ಭಟ್ಟ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಜಿ.ಬಿ. ಕೃಷ್ಣಮೂರ್ತಿ, ಸಚಿನ ನಾಯ್ಕ, ಶ್ವೇತಾ ಜೊಗಳೆಕರ, ಸಹ ಶಿಕ್ಷಕರಾದ ದೇವರಾಜ ಎಂ. ಚೇತನಾ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸಲು ಸಹಕರಿಸಿದರು. ಒಟ್ಟು 169 ಮಕ್ಕಳಿಗೆ ತಪಾಸಣೆ ಮಾಡಿ ಸಮಸ್ಯೆ ಇರುವ ಮಕ್ಕಳಿಗೆ ಔಷಧಿ ವಿತರಿಸಲಾಯಿತು.