ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಜವಾಹರ್ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ತಾಲೂಕಿನ ತೆಲಸಂಗ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಫೆ.3 ರಂದು ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಪೂರ್ವ ಭಾಗದ ವಿವಿಧ ಗ್ರಾಮಸ್ಥರು ಈ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಕೆಎಲ್ಇ ಸಂಸ್ಥೆಯ ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಹಾಗೂ ಪಟ್ಟಣದ ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ ಹೇಳಿದರು.
ಪಟ್ಟಣದ ಶ್ರೀ ಶಿವಯೋಗಿ ಮುರುಗೇಂದ್ರ ಸ್ವಾಮೀಜಿ ಮಹಾವಿದ್ಯಾಲಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಅನೇಕ ತಾಲೂಕುಗಳಲ್ಲಿ, ಹೋಬಳಿ ಮಟ್ಟದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಡಾ.ಪ್ರಭಾಕರ ಕೋರೆ ಅವರ ಪುತ್ರ ಅಮಿತ್ ಕೋರೆ ಅವರು ಉದ್ಯಮ ಕ್ಷೇತ್ರದಲ್ಲಿ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಸರು ಮಾಡಿದವರು. ಈ ಆರೋಗ್ಯ ತಪಾಸಣಾ ಶಿಬಿರವನ್ನು ಅಮಿತ್ಅಣ್ಣಾ ಪ್ರಭಾಕರ ಕೋರೆ ಅಭಿಮಾನಿ ಬಳಗದಿಂದಲೇ ಹಮ್ಮಿಕೊಳ್ಳಲಾಗಿದೆ ಎಂದರು.ಈ ಶಿಬಿರದಲ್ಲಿ ಹೃದಯ ರೋಗ, ಹೃದಯ ಶಸ್ತ್ರ ಚಿಕಿತ್ಸೆ, ಮೂತ್ರಕೋಶ, ಮೂತ್ರಪಿಂಡ ಚಿಕಿತ್ಸೆ, ಗ್ಯಾಸ್ಕೋ ಸರ್ಜರಿ, ಮಧುಮೇಹ ಚಿಕಿತ್ಸೆ, ನೇತ್ರ ಶಸ್ತ್ರ ಚಿಕಿತ್ಸೆ, ಶ್ವಾಸಕೋಶ ಚಿಕಿತ್ಸೆ, ಎಲುಬು ಕೀಲು ಮರುಜೋಡನೆ, ಕಿವಿ, ಮೂಗು, ಗಂಟಲು ಚಿಕಿತ್ಸೆ, ಕ್ಯಾನ್ಸರ್ ರೋಗ ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ದಂತ ರೋಗ ಚಿಕಿತ್ಸೆ ಸೇರಿದಂತೆ ಅನೇಕ ಗಂಭೀರ ಚಿಕಿತ್ಸೆಗಳನ್ನೂ ಸಹ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದರು. ಹಲವು ರೋಗಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು ಗಂಭೀರ ಚಿಕಿತ್ಸೆಗಳಿಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಪಾಸ್ ಕೊಟ್ಟು ರೋಗಿಗಳ ಸಂಖ್ಯೆ ಹೆಚ್ಚಾದರೆ ಆಸ್ಪತ್ರೆಯಿಂದಲೇ ವಾಹನದ ವ್ಯವಸ್ಥೆ ಮಾಡಿ, ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು. ಅಥಣಿ ತಾಲೂಕಿನ ಸಾರ್ವಜನಿಕ ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆಯಿರಿ ಎಂದು ಮನವಿ ಮಾಡಿದರು. ಈ ವೇಳೆ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಶಂಭು ಮಮದಾಪೂರ, ವಿಜಯಕುಮಾರ ಬುರ್ಲಿ, ಅಲ್ಲಪ್ಪಣ್ಣಾ ನಿಡೋಣಿ, ರಾಜು ಹಾದಿಮನಿ, ಅಶೋಕ ಬುರ್ಲಿ, ಪ್ರಕಾಶ ಪಾಟೀಲ, ಪ್ರಾಚಾರ್ಯ ಬಿ.ಎಸ್ ಕಾಂಬಳೆ, ಮುಖ್ಯೋಪಾಧ್ಯಾಯ ಎಸ್.ಜಿ ಸಲಗರೆ ಸೇರಿದಂತೆ ಇನ್ನಿತರರು ಇದ್ದರು.