ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕು ವಕೀಲರ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬೆಂಗಳೂರಿನ ನಿಧಿ ಹೆಲ್ತ್ ಕೇರ್ ಸಹಯೋಗದೊಂದಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರವು ನ್ಯಾಯಾಲಯದ ಆವರಣದಲ್ಲಿ ನಡೆಯಿತು.ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಕುಮಾರ್ ಶಿವಪೂಜಿ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಆರೋಗ್ಯ ಶಿಬಿರಗಳು ಅತ್ಯವಶ್ಯವಾಗಿದೆ. ಪ್ರತಿಯೊಬ್ಬರು ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷೆ ಮಾಡಿಸಿಕೊಳ್ಳುವುದರ ಮೂಲಕ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ವಕೀಲರು ಒತ್ತಡದಿಂದಾಗಿ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಅವರ ಆರೋಗ್ಯ ದೃಷ್ಟಿಯಿಂದ ನ್ಯಾಯಾಲಯದ ಆವರಣದಲ್ಲಿ ಇಂಥ ಶಿಬಿರಗಳ ಆಯೋಜನೆ ಬಹಳ ಅನುಕೂಲವಾಗಿದೆ. ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಕಕ್ಷಿದಾರರು ಹಾಗೂ ನ್ಯಾಯಾಲಯದ ಕಲಾಪಗಳ ನಿರ್ವಹಣೆ ವೇಳೆ ವಕೀಲರು ನಾನಾ ಸಮಸ್ಯೆಗಳನ್ನು ಎದುರಿಸುತ್ತೇವೆ. ಹೀಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಚ್.ಎಸ್.ಕಾವ್ಯಶ್ರೀ, ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ.ನಟೇಶ್, ಉಪಾಧ್ಯಕ್ಷ ಮಲ್ಲಪ್ಪ, ವಕೀಲರಾದ ರಾಣಿ, ಹರ್ಷವರ್ದನ್, ಹೇಮಂತ್, ಮುತ್ತುರಾಜು, ಜಗದೀಶ್ ಇದ್ದರು.ಪ್ರಸನ್ನ ನಾಪತ್ತೆಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮದ ಚೆನ್ನಯ್ಯ ಪುತ್ರ ಪ್ರಸನ್ನ (27) ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕಾಣೆಯಾದ ಯುವಕ ಎಣ್ಣೆಗೆಂಪು ಬಣ್ಣ, ತೆಳು ಶರೀರ, ಕೋಲು ಮುಖ, ಗಡ್ಡ ,ಮೀಸೆ ಬಿಟ್ಟಿದ್ದು ಮನೆಯಿಂದ ಹೊರಡುವಾಗ ಕೆಂಪು ಬಣ್ಣದ ಅರ್ಧ ತೋಳಿನ ಶರಟು ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸ್ ಠಾಣೆ ದೂ- 08 232 3 217 0 ಅಥವಾ ಮೊ-9480 80 48 69 ಅನ್ನು ಸಂಪರ್ಕಿಸಬಹುದು.