ಆರೋಗ್ಯ ಉಚಿತ ತಪಾಸಣೆ: ಔಷಧ ವಿತರಣಾ ಕಾರ್ಯಕ್ರಮ

| Published : Nov 19 2024, 12:47 AM IST

ಸಾರಾಂಶ

ತಾಲೂಕಿನ 11 ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣಾ ಕಾರ್ಯಕ್ರಮ ನಡೆಯಿತು. ನೂರಾರು ಮಂದಿ ತಪಾಸಣೆಗೊಳಪಡಿಸಿಕೊಂಡರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ನ್ಯಾಷನಲ್ ಮೆಡಿಕೋಸ್ ಆರ್ಗನೈಸೇಷನ್, ದಕ್ಷಿಣ ಪ್ರಾಂತ, ಮಡಿಕೇರಿ ವಿಭಾಗ ಸೇವಾ ಭಾರತಿ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ 11 ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣಾ ಕಾರ್ಯಕ್ರಮ ಭಾನುವಾರ ನಡೆಯಿತು.

ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೆಂಚಮ್ಮನ ಬಾಣೆ ಸಮುದಾಯ ಭವನದಲ್ಲಿ ಬಲಮುರಿ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ. ಸೋಮಶೇಖರ್, ಬಳಗುಂದ ಸ.ಹಿ.ಪ್ರಾ. ಶಾಲೆಯಲ್ಲಿ ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ. ಸಾಯಿ ಕೃಷ್ಣ, ಡಾ. ರೋಹಿತ್, ಡಾ. ನಿಂಗನಗೌಡ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ವೈದ್ಯರು ತಪಾಸಣೆ ನಡೆಸಿದರು.

ತಾಲೂಕಿನ ಮಾದಾಪುರ, ಐಗೂರು, ಚೌಡ್ಲು, ಕಿಬ್ಬೆಟ್ಟ, ಶನಿವಾರಸಂತೆ, ನಿಡ್ತ, ತೋಳೂರುಶೆಟ್ಟಳ್ಳಿ, ಬೆಟ್ಟದಳ್ಳಿ, ಸೋಮವಾರಪೇಟೆ ಪಟ್ಟಣದ ಜನತಾ ಕಾಲೋನಿಯಲ್ಲಿ ಶಿಬಿರ ನಡೆಯಿತು. ನೂರಾರು ಮಂದಿ ತಪಾಸಣೆಗೊಳಪಡಿಸಿಕೊಂಡು ಉಚಿತ ಔಷಧ ಪಡೆದರು.

ಸಮುದಾಯ ಆರೋಗ್ಯ ಅಧಿಕಾರಿಗಳು, ಗ್ರಾಮ ಸುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ವಯಂ ಸೇವಕರುಗಳು ಪಾಲೊಂಡಿದ್ದರು. ಇದೇ ಸಂದರ್ಭ ಜನರಿಗೆ ಆಯುಷ್ಮಾನ್ ಕಾರ್ಡ್ ಮಾಡಿ ಕೊಡಲಾಯಿತು.