ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ತಾಲೂಕಿನ ಬಾಡಗಂಡಿಯ ಎಸ್. ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅವಳಿ ಜಿಲ್ಲೆಯ ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ ಫೆ.15 ವರೆಗೆ ಉಚಿತ ಆರೋಗ್ಯ ಸೇವೆಯನ್ನು ಮುಂದುವರೆಸಲಾಗುತ್ತದೆ ಎಂದು ಸಂಸ್ಥಾಪಕರು ಅಧ್ಯಕ್ಷರು, ಮಾಜಿ ಸಚಿವ ಎಸ್. ಆರ್. ಪಾಟೀಲ ಹೇಳಿದರು.ಎಸ್. ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.3ರಿಂದ ಆರಂಭಗೊಂಡ ಉಚಿತ ಆರೋಗ್ಯ ಸೇವೆಯು, ಗ್ರಾಮೀಣ ಭಾಗದ ಕಷ್ಟದಲ್ಲಿ ಮತ್ತು ಆರ್ಥಿಕವಾಗಿ ತೊಂದರೆ ಇದ್ದವರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿರುವುದರಿಂದ ಪ್ರತಿದಿನ 800ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದರು.
ಈಗಾಗಲೇ 100ಕ್ಕೂ ಹೆಚ್ಚು ವಿವಿಧ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ. ನೋಂದಣಿ, ಶಸ್ತ್ರ ಚಿಕಿತ್ಸೆ, ಔಷಧಿ ಸೇರಿದಂತೆ ಎಲ್ಲವೂ ಉಚಿತವಾಗಿದೆ. ಇದರ ಸದುಪಯೋಗವನ್ನು ಅವಳಿ ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.ಶ್ರೀಮತಿ ಶಾಂತಾದೇವಿ ಸ್ಮರಣಾರ್ಥ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿಯೂ ಜನವರಿ 29 ರಿಂದ ಫೆ. 15 ರವರೆಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ ಮಾತನಾಡಿ, ಆರೋಗ್ಯ ತಪಾಸಣೆಯಲ್ಲಿ ರಕ್ತ, ಮೂತ್ರ ಪರೀಕ್ಷೆ, ಇಸಿಜಿ, ಎಕ್ಷರೆ ಇತ್ಯಾದಿ ಸೇವೆಗಳು ಉಚಿತವಾಗಿದ್ದು, ಈ ಭಾಗದ ಅವಳಿ ಜಿಲ್ಲೆಯ ಜನರ ಆರೋಗ್ಯಕ್ಕಾಗಿ ಸುಮಾರು ₹ 13 ಕೋಟಿ ವ್ಯಯವಾಗಲಿದೆ ಎಂದು ಹೇಳಿದರು.ಕಿಡ್ನಿ ಕಲ್ಲು, ಮೂತ್ರ ಕೋಶದ ಕಲ್ಲು ಶಸ್ತ್ರ ಚಿಕಿತ್ಸೆಗಾಗಿ ಹೊರಗಿನ ತಜ್ಞವೈದ್ಯರನ್ನು ಕರೆಯಿಸಿ, ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ಜ.31ರವರೆಗೆ ಉಚಿತ ಸೇವೆ ಮುಕ್ತಾಯಗೊಳ್ಳುತ್ತದೆ ಎಂಬ ಜಿಜ್ಞಾಸೆ ಸಾರ್ವಜನಿಕರಿಗೆ ಬೇಡ. ರೋಗಿಗಳ ದಟ್ಟಣೆ, ಬಡಜನರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಸೇವೆಯನ್ನು ಫೆ.15ರವರೆಗೆ ಮುಂದುವರೆಸಲು ತೀರ್ಮಾಣ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಎಸ್.ಆರ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕುಲಪತಿ ಡಾ.ಧರ್ಮರಾಯ ಇಂಗಳೆ, ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಿಜಯಾನಂದ ಹಳ್ಳಿ, ಶಾಂತಾದೇವಿ ಸ್ಮರಣಾರ್ಥ ಆಯುರ್ವೇದಿಕ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ಎ.ಎ. ಬಾಳಿಕಾಯಿ ಉಪಸ್ಥಿತರಿದ್ದರು.