ಪ್ರಜಾಪ್ರಭುತ್ವ ಗಟ್ಟಿತನ, ಜನರ ಸಶಕ್ತಕ್ಕೆ ಸಂವಿಧಾನ ಮೂಲ ಕಾರಣ: ಸಚಿವ ಈಶ್ವರ್‌ ಖಂಡ್ರೆ

| Published : Jan 27 2024, 01:16 AM IST

ಪ್ರಜಾಪ್ರಭುತ್ವ ಗಟ್ಟಿತನ, ಜನರ ಸಶಕ್ತಕ್ಕೆ ಸಂವಿಧಾನ ಮೂಲ ಕಾರಣ: ಸಚಿವ ಈಶ್ವರ್‌ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವ ಖಂಡ್ರೆ ಮಾತನಾಡಿ, ಬೀದರ್‌ ದಕ್ಷಿಣ ಕ್ಷೇತ್ರದ 104 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 330ಕೋಟಿ ರು., ಅನುಭವ ಮಂಟಪಕ್ಕೆ 40ಕೋಟಿ ರು. ಬಿಡುಗಡೆ, ಶೈಕ್ಷಣಿಕ ಪ್ರಗತಿಗೆ 100ಕೋಟಿ ರು., ಹೊನ್ನಿಕೇರಿ ಅರಣ್ಯದಲ್ಲಿ ಇಕೋ ಟೂರಿಸಂ, ದೇವ ದೇವ ಅಭಿವೃದ್ಧಿಗೆ 50ಕೋಟಿ ರು. ಅನುದಾನ ನೀಡಲಾಗುತ್ತದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆ, ಸಮಪಾಲು ಹಾಗೂ ಸಮಬಾಳು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ 75 ವರ್ಷವಾದರೂ ಗಟ್ಟಿಯಾಗಿ ನಿಲ್ಲಲು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಈ ದೇಶಕ್ಕೆ ಕೊಟ್ಟ ಬೃಹತ್‌ ಲಿಖಿತ ಸಂವಿಧಾನವೇ ಕಾರಣವಾಗಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೊತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಾನು ಈ ಹಿಂದೆಯೂ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವುದು ನನ್ನ ಗುರಿಯಾಗಿದೆ. ಕರೇಜ್‌ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಶೀಘ್ರದಲ್ಲಿ ಜಿಲ್ಲಾಡಳಿತ ಕಾರ್ಯಾರಂಭ ಮಾಡುತ್ತದೆ. ಗೋದಾವರಿ ನದಿ ನೀರಿನ ಸದ್ಬಳಕೆಗಾಗಿ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ. ಕಾರಂಜಾದಿಂದ ಇನ್ನೂ ಹೆಚ್ಚುವರಿಯಾಗಿ 50ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಹರಿಸಲು ಯೋಜನೆ ರೂಪಿಸಲಾಗುತ್ತದೆ ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.

ಬರುವ ಮಾರ್ಚ ಅಂತ್ಯದೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾಥ್‌ ಲ್ಯಾಬ್‌ ಆರಂಭಗೊಳಿಸುವ ಮೂಲಕ ರೋಗಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಗುರಿಯಿದೆ. ಬೀದರ್‌ನ ಮಹಿಳಾ ಪದವಿ ಮಹಾವಿದ್ಯಾಲಯಕ್ಕೆ 100ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ದೇವ ವನ ಅಭಿವೃದ್ಧಿ, ಹೊನ್ನಿಕೇರಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇಕೋ ಟೂರಿಸಂಗಾಗಿ 50ಕೋಟಿ ರು. ಮಂಜೂರಿಸಲಾಗಿದೆ. ಪೌರಾಡಳಿತ ಸಚಿವ ರಹೀಮ್‌ ಖಾನ್‌ ಸಹಕಾರದಿಂದ ಸ್ಥಳೀಯ ಸಂಸ್ಥೆಗಳಿಗೆ 130ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ವಿವರ ನೀಡಿದರು.

ಬೀದರ್‌ ದಕ್ಷಿಣ ಕ್ಷೇತ್ರದ 104 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ₹330ಕೋಟಿ:

ಬೀದರ್‌ ದಕ್ಷಿಣ ಕ್ಷೇತ್ರದ ಬಗದಲ್‌ ಸೇರಿ 104 ಗ್ರಾಮಗಳಿಗೆ ಅನುಕೂಲ ಕಲ್ಪಿಸಲು ಜಲ ಜೀವನ್‌ ಮಿಷನ್‌ನ ಬಹು ಗ್ರಾಮ ಯೋಜನೆಯಡಿ ₹330ಕೋಟಿ ಅನುದಾನ ಕಾಮಗಾರಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಸಿಗುತ್ತಿದ್ದಂತೆ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗುವದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಅನುಭವ ಮಂಟಪಕ್ಕೆ ₹40ಕೋಟಿ ಬಿಡುಗಡೆ, ಶೈಕ್ಷಣಿಕ ಪ್ರಗತಿಗೆ ₹100ಕೋಟಿ:

ಬಸವಕಲ್ಯಾಣದ ಅನುಭವ ಮಂಟಪ ಕಾಮಗಾರಿಯನ್ನು ಬರುವ 2025ರ ಒಳಗಾಗಿ ಪೂರ್ಣಗೊಳಿಸಲು ಶ್ರಮಿಸುತ್ತಿದ್ದು, ಇನ್ನುಳಿದ ಕಾಮಗಾರಿಗಾಗಿ ಬಿಡುಗಡೆಯಾಗಬೇಕಾದ ಅನುದಾನದ ಪೈಕಿ ₹40ಕೋಟಿ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಗೆ ₹400ಕೋಟಿ ಅನುದಾನ ಬರಲಿದ್ದು, ಈ ಪೈಕಿ ಶೇ. 25ರಷ್ಟು ಅನುದಾನವನ್ನು ಶೈಕ್ಷಣಿಕ ಅಭಿವೃದ್ಧಿಗೆ ಬಳಸಲಾಗುವದು ಎಂದು ತಿಳಿಸಿದರು.

ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆ. ರೈತರಿಗೆ ಬೆಳೆ ಹಾನಿ ಪರಿಹಾರ ವಿತರಿಸಲಾಗಿದೆ. ಪ್ರಕೃತಿ ವಿಕೋಪದಡಿ ಕೇಂದ್ರದಿಂದ ನಯಾಪೈಸೆ ಅನುದಾನ ಬಾರದಿದ್ದರೂ ರೈತರ ಸಂಕಷ್ಟಗಳಿಗೆ ರಾಜ್ಯದ ಕಾಂಗ್ರೆಸ್‌ ಮಿಡಿದಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಶಾಲಾ ಶಿಕ್ಷಣ ಇಲಾಖೆಗೆ ಶೇ. 25ರಷ್ಟು ಅನುದಾನ ಕಾಯ್ದಿರಿಸಲಾಗಿದೆ. ಅಕ್ಷರ ಅವಿಷ್ಕಾರ ಕ್ರೀಯಾ ಯೋಜನೆಯಂತೆ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಶಾಲೆಯಂತೆ ಜಿಲ್ಲೆಯ ಒಟ್ಟು 300 ಶಾಲೆಗಳ ಅಭಿವೃದ್ಧಿಗಾಗಿ ಕ್ರೀಯಾ ಯೋಜನೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುಮೋದನೆಗೊಂಡಿದ್ದು, ವಿವಿಧ ಕಾಮಗಾರಿಗಳ ಟೆಂಡರ್‌ ಕಾರ್ಯ ಜಾರಿಯಲ್ಲಿರುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಮ್‌ ಖಾನ್‌, ಬೀದರ್‌ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್‌ ಶಾಸಕ ರಘುನಾಥರಾವ್‌ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಬೀದರ್‌ ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಪೊಲೀಸ್‌ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಲವೀಶ್‌ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಪೊಲೀಸ್‌ ಉಪಾಧೀಕ್ಷಕ ಮಹೇಶ ಮೇಘಣ್ಣನವರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಹಲವರು ಉಪಸ್ಥಿತರಿದ್ದರು.