ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕಾನೂನಿನ ಬಗ್ಗೆ ಗೌರವ ಹೊಂದಿರಬೇಕು. ತಪ್ಪದೇ ಕಾನೂನನ್ನು ಪಾಲಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಲಗೂರು

ಕಡು ಬಡವರಿಗೂ ತಾಲೂಕು ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ಮಾದೇಶ ತಿಳಿಸಿದರು.

ಸಮೀಪದ ಧನಗೂರು ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಗ್ರಾಪಂ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಶೇಷ ಚೇತನರ ದಿನಾಚರಣೆ, ವಿಶ್ವ ಏಡ್ಸ್ ದಿನಾಚರಣೆ ಮತ್ತು ಕಾನೂನು ನೆರವು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕಾನೂನಿನ ಬಗ್ಗೆ ಗೌರವ ಹೊಂದಿರಬೇಕು. ತಪ್ಪದೇ ಕಾನೂನನ್ನು ಪಾಲಿಸಬೇಕು ಎಂದರು.

ಹಲಗೂರು ಪಿಎಸ್ಐ ಲೋಕೇಶ ಮಾತನಾಡಿ, ಏಡ್ಸ್ ಕಾಯಿಲೆಯು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವ ವೈರಾಣು ಆಗಿದೆ. ಇದರ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಅತ್ಯವಶ್ಯಕ. ಹಚ್ಚೆ ಹಾಕಿಸುವುದು, ರಕ್ತವನ್ನು ಪರೀಕ್ಷೆ ಮಾಡದೇ, ನೇರವಾಗಿ ಸ್ವೀಕರಿಸುವುದು, ಅಪರಿಚಿತರೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆಗೆ ಒಳಗಾಗುವುದರಿಂದ ಎಚ್.ಐ.ವಿ ಸೋಂಕು ತಗಲುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಮನುಷ್ಯ ಆರೋಗ್ಯವಂತ ಆಗಿದ್ದಾಗ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ. ಆಧುನಿಕ ಯುಗದಲ್ಲಿ ಯುವ ಸಮುದಾಯ ಅರಿವಿನ ಕೊರತೆಯಿಂದ ಹಲವು ಬಗೆಯ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ. ಏಡ್ಸ್, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಟಿ.ಎ.ಪ್ರಶಾಂತ್ ಬಾಬು ಮಾತನಾಡಿ, ವಿಶೇಷ ಚೇತನರಿಗೆ ಬೇಕಾಗಿರುವುದು ಕೊಂಚ ಸಹಾಯ ಹಾಗೂ ತರಬೇತಿ. ಇಂದು ವಿಶೇಷ ತಾಂತ್ರಿಕತೆ ಹಾಗೂ ಸಾಧನ ಬಳಸಿಕೊಂಡು ವಿಶೇಷ ಚೇತನರು ತಮ್ಮ ನ್ಯೂನ್ಯತೆಗಳನ್ನು ಮೆಟ್ಟಿ ಸಾಧನೆ ಮಾಡಬಹುದು ಎಂದು ಕರೆ ನೀಡಿದರು.

ಈ ವೇಳೆ ತಾಲೂಕು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮಹಾದೇವಪ್ಪ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮಲ್ಲೇಶಪ್ಪ, ಸಿಬ್ಬಂದಿ ಎನ್.ಪಿ.ಶಶಿಕುಮಾರ್, ಮಧು, ಪುಟ್ಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

-------------

22ಕೆಎಂಎನ್ ಡಿ28

ಧನಗೂರು ಗ್ರಾಮದಲ್ಲಿ ನಡೆದ ವಿಶ್ವ ವಿಶೇಷ ಚೇತನರ, ವಿಶ್ವ ಏಡ್ಸ್ ದಿನಾಚರಣೆ ಮತ್ತು ಕಾನೂನು ನೆರವು ಅರಿವು ಕಾರ್ಯಕ್ರಮದಲ್ಲಿ ಜೆಎಂಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹೇಂದ್ರ ಮಾತನಾಡಿದರು.