ಕನ್ನಡಪ್ರಭ ವಾರ್ತೆ ಖಾನಾಪುರಕಷ್ಟಪಟ್ಟು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಪಡೆಯಲು ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಪ್ರಕರಣಗಳು ದಾಖಲಾದರೆ ಅಥವಾ ಅವರಿಗೆ ಯಾವುದೇ ರೀತಿಯ ಅನ್ಯಾಯವಾದರೆ, ವಕೀಲರ ಸಂಘವು ರೈತರ ಪರವಾಗಿ ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನು ಹೋರಾಟ ನಡೆಸಲಿದೆ ಎಂದು ಖಾನಾಪುರ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಕಷ್ಟಪಟ್ಟು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಪಡೆಯಲು ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಪ್ರಕರಣಗಳು ದಾಖಲಾದರೆ ಅಥವಾ ಅವರಿಗೆ ಯಾವುದೇ ರೀತಿಯ ಅನ್ಯಾಯವಾದರೆ, ವಕೀಲರ ಸಂಘವು ರೈತರ ಪರವಾಗಿ ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನು ಹೋರಾಟ ನಡೆಸಲಿದೆ ಎಂದು ಖಾನಾಪುರ ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ವಕೀಲರ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ರೈತರ ಹೋರಾಟಕ್ಕೆ ಖಾನಾಪುರ ವಕೀಲರ ಸಂಘ ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮಂಗಳವಾರವೂ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಭೆಯ ಬಳಿಕ ವಕೀಲರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಗೆ ತೆರಳಿ, ತಹಸೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು. ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸುವಂತೆ ಮನವಿಯಲ್ಲಿ ಆಗ್ರಹಿಸಿದರು.

ವಕೀಲರಾದ ಎಚ್.ಎನ್. ದೇಸಾಯಿ, ಎಂ.ವೈ. ಕದಮ, ಐ.ಬಿ. ಲಂಗೋಟಿ, ವಿಜಯ ಹಿರೇಮಠ, ಸುರೇಶ ಲೋಟೂರಕರ, ಆರ್.ಎನ್. ಪಾಟೀಲ, ಬಿ.ಐ. ಪಾಟೀಲ, ಸುರೇಶ ಭೋಸಲೆ ಸೇರಿದಂತೆ ವಕೀಲರು, ಕಕ್ಷಿದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.