ಚಿನ್ನದ ಬೆಲೆ ಗಗನಕ್ಕೇರಿದ್ದು, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಚಿನ್ನ ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಹೆಚ್ಚು ಪ್ರಸ್ತುತ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಹೇಳಿದರು.

ನವಲಗುಂದ: ಚಿನ್ನದ ಬೆಲೆ ಗಗನಕ್ಕೇರಿದ್ದು, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಚಿನ್ನ ಖರೀದಿಗೆ ಹಿಂದೇಟು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಹೆಚ್ಚು ಪ್ರಸ್ತುತ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳು ಹೇಳಿದರು.

ಭಾನುವಾರ ತಾಲೂಕಿನ ಶಾನವಾಡ ಗ್ರಾಮದಲ್ಲಿ ಬುದ್ಧ- ಬಸವ- ಅಂಬೇಡ್ಕರ್ ಜನಜಾಗೃತಿ ವೇದಿಕೆ ತಾಲೂಕು ಘಟಕ ನವಲಗುಂದ, ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ವಿನೋದ ಅಸೂಟಿ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ 2ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅನಾವಶ್ಯಕ ವೆಚ್ಚ ಮಾಡಿ ಆಡಂಬರ ತೋರಿಸುವ ಹಾಗೂ ಮದುವೆ ನೆಪದಲ್ಲಿ ಒಣ ಪ್ರತಿಷ್ಠೆಗಾಗಿ ಲಕ್ಷಾಂತರ ಹಣ ವೆಚ್ಚ ಮಾಡುವುದು ಸರಿಯಲ್ಲ. ಸರಳ ಹಾಗೂ ಕಡಿಮೆ ವೆಚ್ಚದಲ್ಲಿ ಉಚಿತ ಸಾಮೂಹಿಕ ವಿವಾಹಗಳು ನಡೆದರೆ ಹೆಚ್ಚು ಅನುಕೂಲವಾಗುತ್ತದೆ. ಮದುವೆ ಮಾಡಿಕೊಂಡು ನಂತರ ಸಾಲ ತೀರಿಸುವುದಕ್ಕಾಗಿ ಎಷ್ಟೋ ಕುಟುಂಬಗಳು ಗುಳೆ ಹೋಗಿ ದುಡಿಯುವ ಗ್ರಾಮೀಣ ಕುಟುಂಬಗಳನ್ನು ನಾವು ಕಂಡಿದ್ದೇವೆ. ಅಂತಹ ಕಾರ್ಯಗಳಿಗೆ ಮಂಗಲ ಹಾಡಲು ಉಚಿತ ಸಾಮೂಹಿಕ ವಿವಾಹ ಹೆಚ್ಚು ನಡೆಯಲಿ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳದ ವತಿಯಿಂದ ಪ್ರತಿವರ್ಷ ಸಾಮೂಹಿಕ ವಿವಾಹಗಳು ಮಠಾಧೀಶರ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ ಹಾಡುತ್ತವೆ. ವಧು-ವರರು ದಾಂಪತ್ಯ ಜೀವನವನ್ನು ಮಾದರಿಯಾಗಿ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ನವಲಗುಂದ ಪಂಚಗೃಹ ಹಿರೇಮಠದ ನೂತನ ಉತ್ತರಾಧಿಕಾರಿ ವೀರಬಸವ ದೇವರು, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಇತರರು ಮಾತನಾಡಿದರು.

ಜಿಲ್ಲಾ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಮೋಹನ ಗುಡಿಸಲಮನಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ, ಸದುಗೌಡ ಪಾಟೀಲ, ಬಿ.ಎಲ್. ಹಳ್ಳಿಕೇರಿ, ರಾಮಣ್ಣ ಕೊಪ್ಪದ, ಸಾಮೂಹಿಕ ವಿವಾಹ ಆಯೋಜಕ ಮಂಜುನಾಥ ವೀರಪ್ಪನವರ, ಶರೀಫ ಶಿವಯೋಗಿ ಸೂರಪ್ಪನವರ, ಸಚಿನ ಗಾಡಗೋಳಿ, ಶರಣು ಯಮನೂರ, ಚರಂತಯ್ಯಾ ಚಿಕಮಠ, ಸುಭಾಸ ದುಬ್ಬದಮಟ್ಟಿ, ಅಮರಪ್ಪ ಆಮಣ್ಣವರ, ಆನಂದ ತೋರಗಲ್ಲ, ಶೇಕಪ್ಪ ಚುಲಕಿ ಸೇರಿದಂತೆ ಹಲವರಿದ್ದರು.