ಪತ್ರಿಕಾ ವಿತರಕರಿಗೆ ವಿಮೆ ಯೋಜನೆಯ ಉಚಿತ ನೋಂದಣಿ ಕಾರ್ಯಕ್ರಮ

| Published : Jan 17 2024, 01:45 AM IST

ಸಾರಾಂಶ

ಗದಗ ನಗರದ ಗಂಗಾಪೂರ ಪೇಟೆಯ ಬನಶಂಕರಿ ದೇವಸ್ಥಾನದಲ್ಲಿ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ, ವಿಮೆ ಯೋಜನೆಯ ಉಚಿತ ನೋಂದಣಿ ಕಾರ್ಯಕ್ರಮ ಜರುಗಿತು.

ಗದಗ: ನಗರದ ಗಂಗಾಪೂರ ಪೇಟೆಯ ಬನಶಂಕರಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಜಿಲ್ಲಾಡಳಿತ ಹಾಗೂ ಗದಗ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಸಹಯೋಗದೊಂದಿಗೆ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ, ವಿಮೆ ಯೋಜನೆಯ ಉಚಿತ ನೋಂದಣಿ ಕಾರ್ಯಕ್ರಮ ಜರುಗಿತು.

ಜಿಲ್ಲಾ ಕಾರ್ಮಿಕ ಅಧಿಕಾರಿ ಬಿ.ಆರ್. ಜಾಧವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿಕ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪತ್ರಿಕೆ ವಿತರಿಸುತ್ತಾರೆ. ದಿನಪತ್ರಿಕೆ ವಿತರಿಸಲು ಸೈಕಲ್ ಹಾಗೂ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಗೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ ಎಂದರು. ೧೬ರಿಂದ ೫೯ ವರ್ಷದೊಳಗಿನವರು ಕೇಂದ್ರ ಸರಕಾರದ ಇ-ಶ್ರಮ ಪೋರ್ಟಲ್‌ನಲ್ಲಿ ನ್ಯೂಸ್ ಪೇಪರ್ ಬಾಯ್ ಎಂಬ ವರ್ಗದಡಿ ನೋಂದಣಿಯಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್‌ಐ, ಇಪಿಎಫ್ ಸೌಲಭ್ಯ ಹೊಂದಿರಬಾರದು. ಎಲ್ಲ ಅರ್ಹ ಪತ್ರಿಕಾ ವಿತರಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ, ಸಂಘದ ಜಿಲ್ಲಾಧ್ಯಕ್ಷ ವೀರಬಸಯ್ಯ ವಿರಕ್ತಮಠ, ಹಿರಿಯ ಸಲಹೆಗಾರ ಕೆ.ಎಸ್.ಹಿರೇಮಠ ಸೇರಿದಂತೆ ಪತ್ರಿಕಾ ವಿತರಕರು ಹಾಜರಿದ್ದು, ನೋಂದಣಿ ಮಾಡಿಸಿಕೊಂಡರು.