ಸಾರಾಂಶ
ಹೊಸದುರ್ಗ: ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಜ.7ರಂದು ಬೆಳಗ್ಗೆ 10.30ರಿಂದ ಕನಕ ಮಾರ್ಗ ಸಿನಿಮಾವನ್ನು 3 ಶೋಗಳಲ್ಲಿ ಉಚಿತವಾಗಿ ಪ್ರದರ್ಶಿಸಲಾಗುವುದು ಎಂದು ಸಿನಿಮಾ ಚಿತ್ರಕಥೆ, ನಿರ್ದೇಶಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶಾಲ್ ರಾಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರಪೇಟೆ ಮಲ್ಲೇಶಪ್ಪ ಅವರ ಕನಕನ ಹೆಜ್ಜೆ ಕಾದಂಬರಿ ಆಧರಿಸಿ ಕನಕ ಮಾರ್ಗ ಸಿನಿಮಾ ರಚಿಸಲಾಗಿದೆ. ಕೆಂಪೇಗೌಡ ಪಾಟೀಲ್ ನಿರ್ಮಾಪಕರಾಗಿದ್ದಾರೆ. ದಾಸಶ್ರೇಷ್ಠ ಕನಕದಾಸರ ಜೀವನ, ಅವರು ನಡೆದ ದಾರಿ, ತತ್ವಾದರ್ಶ ಹಾಗೂ ಕೀರ್ತನೆಗಳನ್ನು ಸಿನಿಮಾ ಕೇಂದ್ರೀಕರಿಸಿದೆ.ವೇದಿಕ್ ಮೈಸೂರು ಹೀರೋ ಆಗಿ, 10ರಿಂದ 12 ವರ್ಷದ 15ಕ್ಕೂ ಹೆಚ್ಚು ಮಕ್ಕಳು ಹಾಗೂ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ ಅವರು ಅಭಿನಯಿಸಿದ್ದಾರೆ. ಇಂದಿನ ಕಮರ್ಷಿಯಲ್ ಭರಾಟೆಯಲ್ಲಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸುವ ಮೊದಲು ಶಾಲಾಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರದರ್ಶಿಸುವ ಉದ್ದೇಶ ಎಂದು ತಿಳಿಸಿದರು.
ಕನಕ ಮಾರ್ಗ ಸಿನಿಮಾ 2.24 ಗಂಟೆ ಪ್ರದರ್ಶನ ಆಗಲಿದೆ. ಈ ಸಿನಿಮಾವನ್ನು ಮೊದಲು ವೀಕ್ಷಿಸಿದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಈಶ್ವರಾನಂದಪುರಿ ಸ್ವಾಮೀಜಿ ಅವರು ತುಂಬಾ ಅತ್ತಿದ್ದಾರೆ. ಏಕೆಂದರೆ ಮಕ್ಕಳು ಅಷ್ಟೊಂದು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಗದಗನಲ್ಲಿ ಈ ಸಿನಿಮಾ ಪ್ರದರ್ಶಿಸಿದ್ದನ್ನು ವೀಕ್ಷಿಸಿದ ಶಾಲಾ ಮಕ್ಕಳು ಪ್ರೇರಿತರಾಗಿ ಅಳುವ ಮೂಲಕ ಶಿಕ್ಷಕರ ಕಾಲಿಗೆ ಬಿದ್ದು ಉತ್ತಮ ವಿದ್ಯಾರ್ಥಿಗಳಾಗಿ ಹಾಗೂ ವಾರದಲ್ಲಿ ಒಂದು ದಿನ ಯಾವುದೇ ಕಾರಣಕ್ಕೂ ಮೊಬೈಲ್ ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಕನಕದಾಸರ ಆದರ್ಶ ಬದುಕು ವಿಶೇಷವಾಗಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಸಿನಿಮಾವನ್ನು ಕಾಗಿನೆಲೆ, ಬಾಡ, ಹಾವೇರಿ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊಸದುರ್ಗ ತಾಲೂಕಿನ ಶಾಲಾ ಕಾಲೇಜಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.ಹೊಸದುರ್ಗ ತಾಲೂಕು ಕುರುಬ ಸಂಘದ ಕಾರ್ಯದರ್ಶಿ ಎಚ್.ಟಿ.ಟಿ.ವೆಂಕಟೇಶ್ ಮಾತನಾಡಿ, ಸಮಾಜ ಹಾಗೂ ಸಹೋದರ ಸಮುದಾಯಗಳ ಒತ್ತಾಸೆ ಮೇರೆಗೆ ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಜ.7ಕ್ಕೆ ಬೆಳಗ್ಗೆ 10 ಗಂಟೆಗೆ ಕನಕ ಮಾರ್ಗ ಸಿನಿಮಾ ಉಚಿತ ಪ್ರದರ್ಶನಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಚಾಲನೆ ನೀಡಲಿದ್ದಾರೆ. ಕೆಲ್ಲೋಡು ಕನಕ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ. ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸಂತೋಷ್, ಮಾಜಿ ಸದಸ್ಯ ವೆಂಕಟೇಶ್ ದಳವಾಯಿ, ಯುವಮುಖಂಡ ರಾಮ್ಕಿ ಮಾಚೇನಹಳ್ಳಿ ಹಾಜರಿದ್ದರು.