ಬೆಳಗಾಲಪೇಟೆಯಲ್ಲಿ ಸೈನ್ಯಕ್ಕೆ ಸೇರುವ ಯುವಕರಿಗೆ ಉಚಿತ ತರಬೇತಿ

| Published : Jun 20 2024, 01:08 AM IST

ಬೆಳಗಾಲಪೇಟೆಯಲ್ಲಿ ಸೈನ್ಯಕ್ಕೆ ಸೇರುವ ಯುವಕರಿಗೆ ಉಚಿತ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಒಂದು ತಿಂಗಳ ಸೈನ್ಯ ತರಬೇತಿ ನಡೆಸುತ್ತಿದ್ದು, ರಾಜ್ಯದ ೧೨ ಜಿಲ್ಲೆಗಳ ೯೨ ಸೇನಾ ಸೇವಾಪೇಕ್ಷಿತ ಯುವಕರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸೈನ್ಯಕ್ಕೆ ಸೇರುವ ಯುವ ಉತ್ಸಾಹಿ ಯುವಕರನ್ನು ಸಿದ್ಧಗೊಳಿಸುವ ಉಚಿತ ತರಬೇತಿ ಶಿಬಿರವೊಂದು ಬೆಳಗಾಲಪೇಟೆಯಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿದೆ.

ಹಾನಗಲ್ಲ ತಾಲೂಕಿನ ಬೆಳಗಾಲಪೇಟೆಯಲ್ಲಿ ಶ್ರೀವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ, ಶ್ರೀಗುರು ಕುಮಾರೇಶ್ವರಮಠ ಜೀರ್ಣೋದ್ಧಾರ ಸೇವಾ ಸಮಿತಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ್‌ ಸಂಯುಕ್ತವಾಗಿ ಒಂದು ತಿಂಗಳ ಸೈನ್ಯ ತರಬೇತಿ ನಡೆಸುತ್ತಿದ್ದು, ರಾಜ್ಯದ ೧೨ ಜಿಲ್ಲೆಗಳ ೯೨ ಸೇನಾ ಸೇವಾಪೇಕ್ಷಿತ ಯುವಕರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರತಿದಿನ ಬೆಳಗಿನ ೪.೩೦ಕ್ಕೆ ಆರಂಭವಾಗುವ ತರಬೇತಿ ಚಟುವಟಿಕೆಗಳು ರಾತ್ರಿ ೧೦ ಗಂಟೆಯವರೆಗೆ ನಿರಂತರವಾಗಿರುತ್ತವೆ. ಧ್ಯಾನ ಪ್ರಾತಃಸ್ಮರಣೆ, ಶಾರೀರಿಕ ತರಬೇತಿ ಮೊದಲಾಗಿ, ಕ್ರೀಡಾ ಚಟುವಟಿಕಗಳ ಮೂಲಕ ಶಾರೀರಿಕ ಸಶಕ್ತೀಕರಣಕ್ಕೆ ತರಬೇತಿ ನೀಡಲಾಗುತ್ತಿದೆ. ಸಮಾಜ ಸೇವೆಯ ತರಬೇತಿಗಾಗಿ ದೇವಸ್ಥಾನಗಳ ಸ್ವಚ್ಛತೆ, ರುದ್ರಭೂಮಿಯಲ್ಲಿನ ಕಂಟಿ ಕಸ ತೆಗೆದು, ಅಲ್ಲಿ ಒಳ್ಳೆಯ ಗಿಡ ನೆಡುವುದು ಸೇರಿದಂತೆ ಊರಿನಲ್ಲಿ ಸ್ವಚ್ಛತೆ ಕೈಗೊಂಡು ಊರಲ್ಲಿ ಜಾಗೃತಿ ಮೂಡಿಸುವ ತರಬೇತಿಯನ್ನು ನೀಡಲಾಗುತ್ತಿದೆ. ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರೀತಿ ವಿಶ್ವಾಸವನ್ನು ಬೆಳೆಸಲಾಗುತ್ತಿದೆ. ಸ್ವಾಧ್ಯಾಯ, ಕಡ್ಡಾಯ ವಿಶ್ರಾಂತಿ, ಶಿಸ್ತು ಸಂಯಮದ ತರಬೇತಿ, ಆಟಗಳ ಮೂಲಕ ಶಾರೀರಿಕ ಸದೃಢತೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಸೈನ್ಯಕ್ಕೆ ಸೇರಲು ಮೊದಲು ಲಿಖಿತ ಪರೀಕ್ಷೆ ಪಾಸಾಗಬೇಕು. ಅದಕ್ಕಾಗಿ ನುರಿತ ತರಬೇತುದಾರರಿಂದ ಲಿಖಿತ ಪರೀಕ್ಷಾ ತರಬೇತಿಯನ್ನೂ ಕೂಡ ನೀಡಲಾಗುತ್ತಿದೆ. ಬೆಳಗಾಲಪೇಟೆ ಪಕ್ಕದ ಹಳ್ಳಿಗಳಿಗೆ ಸೈನ್ಯದ ಓಟ ನಡೆಸಿ ಗ್ರಾಮಗಳಲ್ಲಿ ಸೈನ್ಯದ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ.

ಈ ತರಬೇತಿಗೆ ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಸೌಹಾರ್ದದಯುತ ಸಾಥ್ ನೀಡಿದ್ದಾರೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಂತವೀರೇಶ ನೆಲೋಗಲ್ಲ, ಶ್ರೀಗುರು ಕುಮಾರೇಶ್ವರ ಮಠ ಜೀರ್ಣೋದ್ಧಾರ ಸೇವಾ ಸಮತಿ ಅಧ್ಯಕ್ಷ ಜಯಲಿಂಗಪ್ಪ ಹಳಕೊಪ್ಪ ತಮ್ಮ ಕಮಿಟಿಯೊಂದಿಗೆ ಸಹಕಾರ ನೀಡಿದ್ದಾರೆ. ಅತ್ಯಂತ ಪರಿಣಾಮಕಾರಿಯಾದ ತರಬೇತಿ ಇದಾಗಿದ್ದು, ಬಹುತೇಕ ಶಿಬಿರಾರ್ಥಿಗಳು ರೈತರು ಹಾಗೂ ರೈತ ಕಾರ್ಮಿಕರ ಮಕ್ಕಳು ಇಲ್ಲಿದ್ದಾರೆ.

ಬಾಗಲಕೋಟೆಯ ಹನಗುಂಡಿ ಗ್ರಾಮದ ಶಿಬಿರಾರ್ಥಿ ಬಸವರಾಜ ಪಾಟೀಲ ಸೈನಿಕನೇ ಆಗಬೇಕೆಂಬ ಹಂಬಲಕ್ಕಾಗಿ ತರಬೇತಿಗೆ ಬಂದಿದ್ದೇನೆ. ಈ ಬಾರಿ ನನ್ನ ಆಯ್ಕೆ ಖಚಿತ. ಇಲ್ಲಿ ಅತ್ಯುತ್ತಮ ಉಚಿತ ತರಬೇತಿ ಇದೆ. ಉಚಿತ ಎಂದು ಯಾವುದೂ ನಿರ್ಲಕ್ಷ್ಯವಿಲ್ಲ ಎನ್ನುತ್ತಾರೆ. ಅಕ್ಕಿಅಲೂರಿನ ಭರತಕುಮಾರ ಮಿರ್ಜಿ ಹಾಗೂ ಗುರುಸ್ವಾಮಿ ಸಾಲಿಮಠ ಎಲ್ಲರೂ ವೈದ್ಯರು ಎಂಜಿನಿಯರ್ ಆದ್ರೆ ಸೈನ್ಯದಲ್ಲಿ ಕೆಲಸ ಮಾಡುವವರು ಯಾರು? ಅದಕ್ಕಾಗಿ ಸೋಲ್ಜರ್ ಆಗಲು ತರಬೇತಿಗೆ ಬಂದಿದ್ದೇವೆ ಎಂದರು. ರಾಮದುರ್ಗದ ಹನುಮಂತ ತಪಸಿ ಪಿಎಸ್‌ಐ, ಪೊಲೀಸ್‌ ಅಥವಾ ಸೈನ್ಯಕ್ಕೆ ಸೇರುವುದು ನನ್ನ ಬಯಕೆ. ಎಲ್ಲದಕ್ಕೂ ತರಬೇತಿ ಇಲ್ಲಿದೆ. ನಿಜಕ್ಕೂ ಈ ತರಬೇತಿ ನನಗೆ ಹೊಸ ಆಶಾ ಭಾವನೆ ಮೂಡಿಸಿದೆ. ಒಳ್ಳೆಯ ತರಬೇತಿ ಎನ್ನುತ್ತಾರೆ.

ತಾಯಿ ಪ್ರೇರಣೆ

ದೇಶ ಕಟ್ಟುವ ಸೈನಿಕರಾಗುವವರಿಗೆ ತರಬೇತಿ ನೀಡುವ ಕಾರ್ಯಕ್ಕೆ ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ ಪ್ರೇರಣೆ ಆದರು. ಎಲ್ಲ ಸಹಕಾರ ನೀಡಿದರು. ಎಲ್ಲರ ಶುಭಾಶಯದಿಂದ ಯಶಸ್ವಿ ತರಬೇತಿ ನಡೆಯುತ್ತಿರುವುದೇ ಸಂತೋಷ. ಇದಕ್ಕೆ ನನ್ನ ತಾಯಿ ದೊಡ್ಡ ಪ್ರೇರಣೆ.

ಸಿದ್ದಲಿಂಗಪ್ಪ ಕಮಡೊಳ್ಳಿ, ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ ಸಂಸ್ಥಾಪಕರು, ಶಿಬಿರ ಸಂಯೋಜಕ

ಅತ್ಯುತ್ತಮ ಶಿಬಿರ

೧೦ ವರ್ಷಗಳು ಸೈನ್ಯದಲ್ಲಿ ಸೇನಾನಿಯಾಗಿ ಸೇವೆ ಸಲ್ಲಿಸಿ ಈ ವರೆಗೆ ರಾಜ್ಯದಲ್ಲಿ ೨೪ ಇಂತಹ ಶಿಬಿರಗಳಲ್ಲಿ ತರಬೇತುದಾರನಾಗಿದ್ದೇನೆ. ಆದರೆ ಈ ಶಿಬಿರ ಉಚಿತ ಮಾತ್ರವಲ್ಲ ಅತ್ಯುತ್ತಮ ಶಿಬಿರ. ಈಗ ೮ ವರ್ಷದಿಂದ ತರಬೇತುದಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ೩೫೦ಕ್ಕೂ ಅಧಿಕ ಜನರು ನನ್ನಲ್ಲಿ ತರಬೇತಿ ಪಡೆದು ಈಗ ಸೈನ್ಯದಲ್ಲಿದ್ದಾರೆ. ಇದು ದೇಶ ಭಕ್ತಿಯ ತರಬೇತಿ.

ರಾಘವೇಂದ್ರ ಕೆ., ತರಬೇತುದಾರ